ಶ್ರೀರಾಮುಲು ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಮಣ್ಣಿನಲ್ಲಿ ಬಿದ್ದ ಮಾಂಸಕ್ಕಾಗಿ ಮುಗಿಬಿದ್ದ ಜನ
ಚಿತ್ರದುರ್ಗ, ನವೆಂಬರ್ 17 : ಮಣ್ಣಲ್ಲಿ ಬಿದ್ದ ಬಾಡೂಟದ ತುಂಡುಗಳನ್ನು ಆಯ್ದುಕೊಳ್ಳಲು ಜನರು ಮುಗಿಬಿದ್ದ ಘಟನೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿದೆ.
ರಾಜ್ಯ ಸರ್ಕಾರ ಸರ್ಕಾರ ಎಸ್‌ಟಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಟಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರದ ಪ್ರತಿಫಲ ಕಾರ್ಯಕ್ರಮ ನಡೆದಿದ್ದು, ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಬಾಡೂಟ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಊಟದ ಸಂದರ್ಭದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಜನತೆಯ ನೂಕು ನೂಗ್ಗಲು ಹೆಚ್ಚಾಗಿದ್ದ ಕಾರಣ ಬಾಡೂಟದ ಸಾಂಬಾರ್ ಪಾತ್ರೆ ಕೆಳಗೆ ಬಿದ್ದು, ಸಾಂಬಾರ್ ಮಣ್ಣಲ್ಲಿ ಬಿದ್ದಿದೆ. ಈ ವೇಳೆ ನೆರೆದಿದ್ದ ಜನರು ಮಣ್ಣಿನಲ್ಲಿ ಬಿದ್ದ ಮಾಂಸದ ತುಂಡುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ನಾ ಮುಂದು ತಾ ಮುಂದು ಎಂದು ಮಣ್ಣಿನ ಮೇಲಿದ್ದ ಮಾಂಸಗಳನ್ನು ಜನರು ಆಯ್ದುಕೊಂಡಿದ್ದಾರೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು ಪ್ರತಿನಿಧಿಸಿರುವ ಮೊಳಕಾಲ್ಮೂರು ಕ್ಷೇತ್ರದ ಗೌರಸಮುದ್ರ ಗ್ರಾಮದಲ್ಲಿ ನಡೆದಿರುವ ಈ ಘಟನೆಯ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ಮಣ್ಣಿನ ಮೇಲೆ ಬಿದ್ದ ಆಹಾರವನ್ನು ಆಯ್ದುಕೊಳ್ಳುತ್ತಿರುವ ಜನರನ್ನು ಕಂಡು ನೋಡುಗರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕ್ಷೇತ್ರದ ಜನರಿಗೆ ಬಾಡೂಟ ನೀಡುವ ನೆಪದಲ್ಲಿ ಜನರ ಮಾನ ಮಾರ್ಯಾದೆ ಹಾರಾಜು ಹಾಕಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.
ಮೊಳಕಾಲ್ಮೂರಿನ ಗೌರಸಮುದ್ರದಲ್ಲಿ ನಡೆದ ಎಸ್‌ಟಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರದ ಪ್ರತಿಫಲ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀರಾಮು ಅವರನ್ನು ಕಂಬಳಿ ಹೊದಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಇದೇ ಭಾನುವಾರದಂದು ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಎಸ್.ಟಿ ಸಮಾವೇಶದ ಕುರಿತು ಸ್ಥಳೀಯ ಮುಖಂಡರು ಹಾಗೂ ಸಮುದಾಯದ ನಾಯಕರ ಜೊತೆ ಶ್ರೀರಾಮುಲು ಬಹಿರಂಗವಾಗಿ ಚರ್ಚೆ ನಡೆಸಿದರು.
ಮೊಳಕಾಲ್ಮೂರು ಕ್ಷೇತ್ರದಿಂದಲೇ ಬಳ್ಳಾರಿಯಲ್ಲಿ ನಡೆಯುವ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಜನರು ಆಗಮಿಸುವ ವಾಗ್ದಾನ ಮಾಡಿರುವುದು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಸಚಿವ ಶ್ರೀರಾಮುಲು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications