ಜಾತಿ ವ್ಯವಸ್ಥೆ ದೇವರ ಸೃಷ್ಟಿಯಂತೂ ಅಲ್ವೇ.. ಅಲ್ಲ ಎಂದ ಸಿಎಂ ಸಿದ್ದರಾಮಯ್ಯ
ಚಿತ್ರದುರ್ಗ, ಜುಲೈ, 20: ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ. ಸ್ವಾರ್ಥಿ ಮನುಷ್ಯರ ಸೃಷ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ವಿದ್ಯೆಯ ಅವಕಾಶ ಇಲ್ಲದವರು ಕುಲ ಕಸುಬನ್ನಷ್ಟೇ ಮಾಡಿಕೊಂಡು ಹಿಂದುಳಿದರು. ಶೋಷಿತ ಸಮುದಾಯಗಳ ವಿಮೋಚನೆಗೆ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಮೇದಾವಿಯಾದರು ಎಂದು ವಿವರಿಸಿದರು.
ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದ ತಳಸಮುದಾಯಗಳು ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸ್ವಾಭಿಮಾನ ಬೆಳೆಸಿಕೊಂಡು ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದರು.
ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದರು. ಎಸ್‌ಸಿ ಅಥವಾ ಎಸ್‌ಟಿ ಸಮುದಾಯಗಳ ಜನಸಂಖ್ಯೆ ರಾಜ್ಯದಲ್ಲಿ ಶೇಕಡ 24ರಷ್ಟು ಇದ್ದಾರೆ.
ಈ ಜನಸಂಖ್ಯೆಗೆ ಸಮವಾಗಿ ಅಭಿವೃದ್ಧಿ ಆಯವ್ಯಯದ ಶೇಕಡ 24ರಷ್ಟು ಹಣವನ್ನು ಈ ಸಮುದಾಯಗಳ ಏಳಿಗೆಗಾಗಿ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಭೋವಿ ಸಮುದಾಯದ ಪ್ರತಿನಿಧಿಯನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿದ್ದು ನಮ್ಮ ಸರ್ಕಾರ ಎಂದರು.
ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ-ವಡ್ಡರ ಅಭಿವೃದ್ಧಿ ನಿಮಗವಾಗಿ ಮರುನಾಮಕರಣ ಮಾಡುಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು. ಸಿದ್ಧರಾಮೇಶ್ವರ ಅಧ್ಯಯನ ಪೀಠಕ್ಕಾಗಿ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದರು.
ಈ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ಡಿ.ಸುಧಾಕರ್, ಸತೀಶ್ ಜಾರಕಿಹೊಳಿ, ಶಾಸಕರಾದ ರಘುಮೂರ್ತಿ, ವೀರೇಂದ್ರ ಪಪ್ಪಿ, ಹೆಚ್.ವಿ.ವೆಂಕಟೇಶ್, ಶ್ರೀನಿವಾಸ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಚಂದ್ರಣ್ಣ ಸೇರಿ ಹಲವು ಮಂದಿ ಸಮಾಜದ ಮುಖಂಡರು ಮತ್ತು ಸಮುದಾಯದ ಶ್ರೀಗಳು ಹಾಗೂ ನಾನಾ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ವಿ.ಸೋಮಣ್ಣ ಆಕ್ರೋಶ: ಹಗರಣಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆಂದು ಕೆಂದ್ರ ಸಚಿವ ವಿ.ಸೋಮಣ್ಣ ಹನೂರಿನಲ್ಲಿ ಆಕ್ರೊಶ ಹೊರಹಾಕಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿಭಿನ್ನವಾಗಿ ಗುರುತಿಸಿಕೊಂಡಿದ್ದರು. ಮೊದಲ ಅವಧಿಯಲ್ಲಿ ಈ ರೀತಿ ಆರೋಪಗಳು ಅವರ ಮೇಲೆ ಬಂದಿರಲಿಲ್ಲ. ಈಗ ಆವರ ಸ್ಥಿತಿ ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತಾಗಿದೆ ಎಂದು ಕಿಡಿಕಾರಿದರು.
ಹಗರಣಗಳಿಂದ ಅವರಿಗೆ ಮುಜುಗರ ಉಂಟಾಗಿದೆ. ಅದಕ್ಕೆ ವಿಚಲಿತರಾಗಿ ಕೆಸರು ಎರಚುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯ ಆರೋಪಗಳನ್ನು ತನಿಖೆಗೆ ಕೊಡಲಿ, ಯಾರದಾರೂ ಅವರಿಗೆ ಬೇಡ ಎಂದಿದ್ದೇವಾ? ಅವರ ಮೇಲೆ ಬಂದಿರುವ ಆರೋಪಕ್ಕೂ ಸಿಬಿಐ ತನಿಖೆಗೆ ಕೊಡಲಿ ಎಂದು ಟಾಂಗ್ ನೀಡಿದರು.
ಮುಡಾದಲ್ಲಿ ಪಡೆದಿರುವ 14 ಸೈಟ್‌ಗಳನ್ನು ವಾಪಾಸ್ ಕೊಡಲಿ. ಹಗರಣದ ತನಿಖೆಯನ್ನು ಸಿಬಿಐಗೆ ಕೊಡಿ. ಇಡಿ, ಸಿಬಿಐ ಕಾಂಗ್ರೆಸ್ ಅಲ್ಲಿದಾಗಲೂ ಇತ್ತು, ಈಗಲೂ ಇದೆ. ವ್ಯವಸ್ಥೆಯನ್ನು ಮೋದಿ ಸರ್ಕಾರ ಪಾರದರ್ಶಕ ಮಾಡಿದೆ. ಮೊಸರಲ್ಲಿ ಕಲ್ಲು ಹುಡುಕದೇ, ಕೆಸರನ್ನು ಬೇರೆಯವರಿಗೆ ಎರಚಬೇಡಿ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.
ಯಾರಾದರೂ ಕೇಳಿದ್ರಾ ಗ್ಯಾರಂಟಿ ಕೊಡಿ ಎಂದು? ಗ್ಯಾರಂಟಿಯಿಂದಾಗಿ ಖಜಾನೆ ಖಾಲಿಯಾಗಿದೆ. ಮೊದಲ ಅವಧಿಯಲ್ಲಿ ವಿಭಿನ್ನ ಸಿಎಂ ಎನಿಸಿಕೊಂಡಿದ್ದೀರಿ, ಈಗಲೂ ಅದೇ ರೀತಿ ಇರಿ ಎಂದರು.
ಇದೇ ವೇಳೆ, ಸೋಮಣ್ಣನನ್ನು ಮುಗಿಸಿಬಿಟ್ಟರು ಎನ್ನುತ್ತಿದ್ದರು. ಆದರೆ, ಮಲೆ ಮಾದಪ್ಪ ನನ್ನ ಕೈ ಬಿಡಲಿಲ್ಲ, ನಾಯಕರು ನನ್ನ ಕೈ ಬಿಡಲಿಲ್ಲ. ಕೆಲಸಗಾರನಿಗೆ ಭಗವಂತನ ಆಶೀರ್ವಾದ ಯಾವಾಗಲೂ ಇರಲಿದೆ ಎಂದರು.












Click it and Unblock the Notifications