ಎರಡು ವರ್ಷ ಕಳೆದರೂ ನಿರ್ಮಾಣವಾಗದ ಮ್ಯಾದನಹೊಳೆ-ಸಮುದ್ರದಹಳ್ಳಿ ಸೇತುವೆ-ಹತ್ತಾರು ಹಳ್ಳಿಗಳ ಜನರಿಗೆ ತಪ್ಪದ ಪೀಕಲಾಟ
ಹಿರಿಯೂರು, ಮೇ, 24: 2022ರಲ್ಲಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಿದ್ದು ಎರಡು ವರ್ಷವಾಗಿದೆ. ಆದರೂ ಯಾವುದೇ ಪುನರ್ ನಿರ್ಮಾಣ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಇದರಿಂದ ಇಲ್ಲಿನ ಜನ ಮಳೆಗಾಲದಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿರಿಯೂರು ತಾಲೂಕಿನ ಸಮುದ್ರದಹಳ್ಳಿ-ಮ್ಯಾದನಹೊಳೆ ಗ್ರಾಮಗಳ ನಡುವೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆಯ ಸೇತುವೆ ಮುರಿದು ಬಿದ್ದು ಎರಡು ವರ್ಷ ಕಳೆದಿದೆ. ಆದರೂ ಸೇತುವೆ ಪುನರ್ ನಿರ್ಮಾಣವಾಗದೆ, ಆ ಭಾಗದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

1979-1980ರಲ್ಲಿ ಸಮುದ್ರದಹಳ್ಳಿ-ಮ್ಯಾದನಹೊಳೆ ಬಳಿ 50ರಿಂದ 60 ಮೀಟರ್ ಉದ್ದದ ಸೇತುವೆಯನ್ನು ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ಆದರೆ 2022ರ ಸೆಪ್ಟೆಂಬರ್ 20ರಂದು ರಾತ್ರಿ 8 ಗಂಟೆ ಸಮಯದಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆ ಈ ಸೇತುವೆ ದಿಡೀರ್ ಕುಸಿದುಹೋಯಿತು. ಮರುದಿನವೇ ವಿಧಾನಸಭಾ ಅಧಿವೇಶನದಲ್ಲಿ ಅಂದಿನ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಈ ವಿಷಯ ಪ್ರಸ್ತಾಪಿಸಿದ್ದರು.
ಆದರೆ ಇದುವರೆಗೂ ಆ ಜಾಗದಲ್ಲಿ ಹಳೆಯ ಪಳೆಯುಳಿಕೆ ರೀತಿ ಮುರಿದ ಸೇತುವೆ ಹಾಗೇ ಇದೆ. ಕೋಡಿಹಳ್ಳಿ, ಮ್ಯಾದನಹೊಳೆ, ಸಮುದ್ರದಹಳ್ಳಿ, ವೇಣುಕಲ್ಲುಗುಡ್ಡ ಸೇರಿದಂತೆ 8ಕ್ಕೂ ಹೆಚ್ಚು ಗ್ರಾಮಗಳು ಹಾಗೂ ಶಿರಾ ತಾಲೂಕಿನ ಗಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ.
ಸುವರ್ಣಮುಖಿ ನದಿಯಲ್ಲಿ ಗ್ರಾಮಸ್ಥರು ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣದಲ್ಲಿಯೇ ಸಂಚರಿಸುತ್ತಿದ್ದು, ಇದುವರೆಗೂ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದ ಬಗ್ಗೆ ಏಳೆಂಟು ಹಳ್ಳಿಗಳ ಗ್ರಾಮಸ್ಥರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ರೈತರು ಜಮೀನುಗಳಿಗೆ ತೆರಳಲು, ಮಕ್ಕಳು ಶಾಲೆಗೆ ತೆರಳಲು 11 ಕಿಲೋ ಮೀಟರ್ ಸುತ್ತಿ ಬಳಸಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ಹಿರಿಯೂರಿನಿಂದ ಶಿರಾ ಗಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದುಂಟು, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮಳೆಗಾಲ ಆರಂಭ ಆಗಿರುವುದರಿಂದ ಕೂಡಲೇ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಮಗೆ 2 ವರ್ಷದಿಂದ ಸೇತುವೆ ಇಲ್ಲದೆ ಪರಿತಪಿಸುವಂತಾಗಿದೆ. ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದಾಗಲೂ ಮನವಿ ಮಾಡಿದ್ದೆವು. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾದರೆ, ಒಂದಿಷ್ಟು ನೀರು ನಿಂತು ರೈತರಿಗೆ ಅನುಕೂಲವಾಗುತ್ತದೆ. 800 ಮೀಟರ್‌ಗೆ ಒಂದೊದಾದರೂ ಚೆಕ್ ಡ್ಯಾo ನಿರ್ಮಾಣವಾದರೆ ಒಳ್ಳೆಯದು.
ಆದರೆ ಎರಡು ಮಳೆಗಾಲ ಮುಗಿದರೂ ಸೇತುವೆ ನಿರ್ಮಾಣವಾಗಲಿಲ್ಲ. ಸೇತುವೆ ಇಲ್ಲದಿದ್ದರಿಂದ ಸುಮಾರು 8 ಕಿಲೋ ಮೀಟರ್ ಹೆಚ್ಚಿನ ದಾರಿ ಸುತ್ತಿ ಬಳಸಿ ಹೋಗಬೇಕಾಗಿದೆ. ಕಳೆದ ವರ್ಷ ಮಳೆ ಇರಲಿಲ್ಲ. ಈ ಕುರಿತು ಸಚಿವ ಡಿ.ಸುಧಾಕರ್ ಅವರ ಗಮನಕ್ಕೂ ತರಲಾಗಿದೆ.
ಈ ವರ್ಷ ಮಳೆ ಆರಂಭವಾಗಿದ್ದು, ನೀರು ಹರಿಯಲು ಶುರುವಾದರೆ, ಜನರಿಗೆ ತುಂಬಾ ತೊಂದರೆಯಾಗುತ್ತದೆ. ಈ ರೀತಿಯ ವಿಳಂಬ ಮುಂದಿನ ಹೋರಾಟಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ 2 ವರ್ಷಗಳ ಹಿಂದೆ ಕುಸಿದ ಸೇತುವೆಯ ಮರು ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಅನುದಾನ ಕೇಳಲಾಗಿದೆ. ಸೇತುವೆ ನಿರ್ಮಾಣಕ್ಕೆ 2 ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸಕ್ತ ವರ್ಷವೂ ಮತ್ತೆ ಅನುದಾನ ಕೇಳಲಾಗುವುದು. ಆ ಭಾಗದ ಹಳ್ಳಿಗಳ ಜನರ ಸುಗಮ ಸಂಚಾರಕ್ಕೆ ಅನುಕೂಲ ಆಗುವಂತೆ ಆದಷ್ಟು ಶೀಘ್ರ ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ
ಬಿಆರ್.ನಾಗರಾಜ್ ಹೇಳಿದ್ದಾರೆ.












Click it and Unblock the Notifications