PM Narendra Modi: ದೇಶದಲ್ಲಿ ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡುವ ನೀಲ ನಕ್ಷೆ ತಯಾರಿ: ಪ್ರಧಾನಿ ಮೋದಿ
ಚಿತ್ರದುರ್ಗ, ಮೇ, 02: ವಿಧಾನಸಭೆ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಪರ ಪ್ರಚಾರ ಮಾಡಲು ರಾಜ್ಯಕ್ಕೆ ಲಗ್ಗೆ ಇಡುತ್ತಲೇ ಇದ್ದಾರೆ. ಅದೇ ರೀತಿ ಈಗಾಗಲೇ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ (ಮೇ 02) ಕೋಟೆನಾಡು ಚಿತ್ರದುರ್ಗದಲ್ಲಿ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.
"ಕೋಟೆ ನಾಡು ಚಿತ್ರದುರ್ಗದ ಜನತೆಗೆ ನನ್ನ ನಮಸ್ಕಾರಗಳು" ಎಂದು ಹೇಳುವ ಮೂಲಕ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಭಾರತ ದೇಶದಲ್ಲಿ ಕರ್ನಾಟಕ ರಾಜ್ಯವನ್ನು ನಂಬರ್ 1 ಸ್ಥಾನಕ್ಕೇರಿಸಲು ನೀಲನಕ್ಷೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಚಿತ್ರದುರ್ಗ ನಗರದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಕೇಳಿಬರುತ್ತಿರುವ ಈ ಸದ್ದು ಇನ್ನು ಬಹಳ ದೂರ ವ್ಯಾಪಿಸಬೇಕು ಎಂದರು.
ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ, ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಇದು ಕರ್ನಾಟಕದ ಮೊದಲ ಚುನಾವಣೆ ಆಗಿದೆ. ರಾಜ್ಯವನ್ನು ದೇಶದಲ್ಲೇ ನಂಬರ್ ಒನ್ ಮಾಡುವ ಚುನಾವಣೆ ಇದಾಗಿದೆ. ಮುಂದಿನ 25 ವರ್ಷಗಳಲ್ಲಿ ರಾಜ್ಯ ಸಾಕಷ್ಟು ಅಭಿವೃದ್ಧಿ ಆಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಅತ್ಯುತ್ತಮ ಚುನಾವಣಾ ಪ್ರಣಾಳಿಕೆಯನ್ನು ಘೋಷಿಸಿದ್ದಕ್ಕಾಗಿ ನಾನು ಕರ್ನಾಟಕ ಬಿಜೆಪಿಯನ್ನು ಅಭಿನಂದಿಸುತ್ತೇನೆ. ಕರ್ನಾಟಕವನ್ನು ಎಲ್ಲಾ ರೀತಿಯಲ್ಲೂ ಭಾರತದ ನಂಬರ್-1 ರಾಜ್ಯವನ್ನಾಗಿ ಮಾಡಲು ಬೇಕಾದ ನೀಲನಕ್ಷೆಯನ್ನು ರೂಪಿಸಲಾಗಿದೆ ಎಂದು ಬಿಜೆಪಿ ಪ್ರಜಾ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಮೋದಿ ಸಮರ್ಥಿಸಿಕೊಂಡರು.
ಪ್ರಿಯಾಂಕಾಗೆ ಕಾಡುಗೊಲ್ಲರ ಮನವಿ ಏನು?
ಇನ್ನು ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯವೂ ಒಂದಾಗಿದೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಲವಾರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಮೈಸೂರು ವಿಶ್ವವಿದ್ಯಾಲಯ ಪ್ರೊ.ಎಂ. ಅನ್ನಪೂರ್ಣಮ್ಮ ಅವರ ಕುಲಶಾಸ್ತ್ರ ಅಧ್ಯಯನವಾಗಿದ್ದು, ರಾಜ್ಯ ಸರ್ಕಾರದಿಂದ ಎಸ್.ಟಿ. ಮೀಸಲಾತಿಯ ಕಡತಗಳು ಕೇಂದ್ರ ಸರ್ಕಾರದ ಹಂತದಲ್ಲಿದೆ.
ಬುಡಕಟ್ಟು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಕಾಡುಗೊಲ್ಲ ಸಮುದಾಯದ ಮುಖಂಡರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಗೆ ಇತ್ತೀಚೆಗಷ್ಟೇ ಮನವಿ ಸಲ್ಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಪರವಾಗಿ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಹಿರಿಯೂರಿಗೆ ಆಗಮಿಸಿದ್ದ ಪ್ರಿಯಾಂಕ ಗಾಂಧಿ ಮೊದಲು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ರೋಡ್ ಶೋ ಆರಂಭವಾಗುವ ಮುನ್ನ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಡುಗೊಲ್ಲ ಸಮುದಾಯದ ಮುಖಂಡರ ಜೊತೆ ಸಂವಾದ ಕಾರ್ಯಕ್ರಮ ನಡೆದ ಬಳಿಕ ಮನವಿ ಸಲ್ಲಿಸಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಮುಖಂಡರು ಸಮುದಾಯದ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.












Click it and Unblock the Notifications