ಭಾರತ್ ಜೋಡೋ ಯಾತ್ರೆ: ಅಪಘಾತದಲ್ಲಿ ರಮೇಶ್ ಸಾವು, ಡಿಕೆಶಿ 10 ಲಕ್ಷ ಪರಿಹಾರ ಘೋಷಣೆ
ಚಿತ್ರದುರ್ಗ, ಅಕ್ಟೋಬರ್, 12: ಭಾರತ್ ಜೋಡೋ ಪಾದಯಾತ್ರೆಯಿಂದ ವಾಪಸ್ ತೆರಳುವಾಗ ರಸ್ತೆ ಅಪಘಾತದಲ್ಲಿ ರಮೇಶ್ (55) ಎಂಬುವವರು ಮೃತಪಟ್ಟಿದ್ದರು. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ರಮೇಶ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಸೋಮವಾರ ಹಿರಿಯೂರು ನಗರ ತಲುಪಿತ್ತು. ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತ ರಮೇಶ್ ಬಂದಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುವಾಗ ಹಿರಿಯೂರು ನಗರದ ಕೋರ್ಟ್ ಬಳಿ ರಸ್ತೆ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರ
ಈ ಕುರಿತು ಭಾರತ್ ಜೋಡೋ ಪಾದಯಾತ್ರೆ ಚಳ್ಳಕೆರೆ ಮಾರ್ಗದ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, "ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಮೇಶ್ ಬಂದಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉತ್ತರೆದಿಬ್ಬ ಗ್ರಾಮದಿಂದ ಬಂದಿದ್ದ ರಮೇಶ್ ಹಿರಿಯೂರಿನಲ್ಲಿ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ರಮೇಶ್ ಸಾವಿನ ವಿಷಯ ಮನಸ್ಸಿಗೆ ನೋವುಂಟು ಮಾಡಿದೆ. ಮೃತನ ಕುಟುಂಬಕ್ಕೆ ಕೆಪಿಸಿಸಿ ವತಿಯಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮೃತನ ಕುಟುಂಬಕ್ಕೆ ಭೇಟಿ ಸಾಂತ್ವನ ಹೇಳಲಿದ್ದಾರೆ. ರಮೇಶ್ ಕುಟುಂಬದ ನೋವಿನಲ್ಲಿ ನಾನೂ ಕೂಡ ಭಾಗಿಯಾಗುತ್ತಿದ್ದೇನೆ," ಎಂದು ಹೇಳಿದರು.

ಇನ್ನು ಮಂಗಳವಾರ ಇಂದು ಭಾರತ್ ಜೋಡೊ ಪಾದಯಾತ್ರೆ ಚಳ್ಳಕೆರೆ ತಾಲೂಕಿನ ಸಾಣಿಕೆರೆಯ ಚೇತನ್ ಹೋಟೆಲ್‌ನಿಂದ ಆರಂಭಗೊಂಡು ಚಳ್ಳಕೆರೆ ಹೊರಹೊಮ್ಮುವ ಸಿದ್ದಾಪುರ ಗೇಟ್ ಬಳಿ ತಲುಪಿತು. ಬುಧವಾರ ಪಾದಯಾತ್ರೆ ಆರಂಭಗೊಂಡು ಮೊಳಕಾಲ್ಮೂರು ಮಾರ್ಗವಾಗಿ ಮುಂದೆ ಸಾಗಲಿದೆ.












Click it and Unblock the Notifications