ಮೊಡ ಕವಿದ ವಾತಾವರಣದಲ್ಲೇ ಮುಂದುವರಿದ ರಾಹುಲ್ ಗಾಂಧಿ ಭಾರತ್ ಜೋಡೊ ಪಾದಯಾತ್ರೆ,
ಚಿತ್ರದುರ್ಗ, ಅಕ್ಟೋಬರ್ 11 : ಕೋಟೆ ನಾಡು ಚಿತ್ರದುರ್ಗದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ, ಇತ್ತ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಗೆ ಮೊಡ ಕವಿದ ವಾತಾವರಣದಲ್ಲೂ ಮುಂದುವರಿದಿದೆ.
ಚಳ್ಳಕೆರೆ ರಸ್ತೆಯ ಸಾಣಿಕೆರೆ ಬಳಿ ಇರುವ ಚೇತನ್ ಹೋಟೆಲ್ ವಿಶ್ರಾಂತಿ ಪಡೆದು ರಾಹುಲ್ ಗಾಂಧಿ ಪಾದಯಾತ್ರೆ ಮುಂದುವರಿಸಿದ್ದಾರೆ. ಸೋಮವಾರ ಹಿರಿಯೂರು ತಲುಪಿದ್ದ ಪಾದಯಾತ್ರೆ ಮಂಗಳವಾರ ಬೆಳಗ್ಗೆ ಹರ್ತಿಕೋಟೆಯಿಂದ ಸಾಣಿಕೆರೆ ತಲುಪಿ ವಿಶ್ರಾಂತಿ ಪಡೆದ ಬಳಿಕ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗೇಟ್ ಬಳಿ ವಾಸ್ತವ್ಯ ಹೂಡಲಿದ್ದಾರೆ.
ಇನ್ನು ರಾಹುಲ್ ಗಾಂಧಿ ಅವರನ್ನು ನೋಡಲು ಸಾಣಿಕೆರೆ ಗ್ರಾಮದಲ್ಲಿ ಜನಸಾಗರವೇ ಕಿಕ್ಕಿರಿದು ತುಂಬಿತ್ತು. ರಸ್ತೆಯ ಎರಡೂ ಬದಿಯಲ್ಲಿ ಜನರು ಬಿಲ್ಡಿಂಗ್, ಮನೆ, ಅಂಗಡಿ, ವಾಹನಗಳ ಮೇಲೆ ನಿಂತು ಪಾದಯಾತ್ರೆ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತ್ತು.

ಇನ್ನು ಯಾತ್ರೆ ಸಾಗುವ ಮಾರ್ಗ ಸಂಪೂರ್ಣ ಸಿಂಗಾರಗೊಂಡಿದೆ. ಸಾಣಿಕೆರೆ - ಚಳ್ಳಕೆರೆ ರಸ್ತೆ ಮಾರ್ಗ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ರಾರಾಜಿಸುತ್ತಿದ್ದವು. ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಗೆ ಬಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಡಿ ಸುಧಾಕರ್, ಶಾಸಕ ಟಿ ರಘುಮೂರ್ತಿ, ಆಂಜನೇಯ, ಗೋವಿಂದಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಬಿ.ಕೆ.ಹರಿಪ್ರಸಾದ್, ಶಾಸಕ ಪ್ರಿಯಾಂಕ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸೇರಿ ಅನೇಕ ಗಣ್ಯರು ಪಾದಯಾತ್ರೆಯಲ್ಲಿ ರಾಹುಲ್ ಅವರಿಗೆ ಸಾಥ್ ನೀಡಿದರು.

ರಾಹುಲ್ ಸಂವಾದ
ಚಳ್ಳಕೆರೆ ತಾಲೂಕಿನ ಸಾಣಿಕೆರೆಯ ಚೇತನ್ ಹೋಟೆಲ್ ಬಳಿ ಭಾರತ ಐಕ್ಯತಾ ಯಾತ್ರೆಯ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಎದುರಾಗುವ ಸಾಧಕ, ಬಾಧಕಗಳ ಕುರಿತು ಚರ್ಚಿಸಿದರು. ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಕಲಚೇತನ ಮಹಿಳೆಯೊಬ್ಬರ ಎರಡು ಕೈ ಇಲ್ಲದ ಕಾರಣ ಕಾಲಿನಲ್ಲಿ ಬರೆಯುತ್ತಿದ್ದದ್ದನ್ನು ರಾಹುಲ್ ಗಾಂಧಿ ಅವರು ಮೊಬೈಲ್ ನಲ್ಲಿ ಪೋಟೋ ಸೆರೆ ಹಿಡಿದಿದ್ದಾರೆ. ದೈಹಿಕ ನ್ಯೂನ್ಯತೆಗಳನ್ನು ಮೆಟ್ಟಿನಿಂತು ಸಾಧ್ಯತೆಗಳನ್ನು ಹುಡುಕುವುದೇ ಮನುಷ್ಯನ ನೈಜ ಸಾಧನೆ ಎಂದು ರಾಹುಲ್ ಗಾಂಧಿ ಮಹಿಳೆಯನ್ನು ಶ್ಲಾಘಿಸಿದರು. ಕಾಲುಗಳನ್ನೇ ಕೈಗಳನ್ನಾಗಿಸಿಕೊಂಡು ಸ್ಪೂರ್ತಿದಾಯಕವಾಗಿ ಬದುಕುತ್ತಿರುವ ಈ ಕಾರ್ಯಕರ್ತೆಯು ಕಾಲುಗಳಲ್ಲಿ ಬರವಣಿಗೆ ಮಾಡುವ ಕೌಶಲ್ಯವನ್ನು ರಾಹುಲ್ ಗಾಂಧಿ ಅವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು.
ಸಾಣಿಕೆರೆಯಲ್ಲಿ ಸಾಗುತ್ತಿರುವ ಭಾರತ ಐಕ್ಯತಾ ಯಾತ್ರೆಗೆ ವಕೀಲರ ತಂಡ ಭಾಗಿಯಾಗಿ ರಾಹುಲ್ ಗಾಂಧಿಯವರೊಂದಿಗೆ ಮಾತುಕತೆ ನಡೆಸಿದರು.












Click it and Unblock the Notifications