ಹಾಸನ, ಚಿಕ್ಕಮಗಳೂರಿನಲ್ಲಿ ಮುಂದುವರೆದ ಕಾಡಾನೆಗಳ ಕಾಟ
ಚಿಕ್ಕಮಗಳೂರು, ಡಿಸೆಂಬರ್ 13; ಕಾಫಿನಾಡು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದೆ. ಜನರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಿಡಿಯುವ ಕಾರ್ಯಾಚರಣೆಯ ವೇಳೆ ದಸರಾ ಆನೆ 'ಅರ್ಜುನ' ಸಾವನ್ನಪ್ಪಿದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿಗೆ ಕೊನೆ ಇಲ್ಲದಂತಾಗಿದೆ. ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿರುವ ತೋಟಕ್ಕೆ ದಾಳಿ ಇಟ್ಟ ಕಾಡಾನೆ ಮನೆಯ ಪಕ್ಕದಲ್ಲಿದ್ದ ಬೈನೆ ಮರವನ್ನು ಮನೆಯ ಮೇಲೆ ಕೆಡವಿದ್ದು, ಮನೆಯಲ್ಲಿದ್ದವರು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮದ ಪ್ರಶಾಂತ್ ಎಂಬುವವರ ತೋಟಕ್ಕೆ ದಾಳಿ ಇಟ್ಟ ಕಾಡಾನೆ, ಮನೆಯ ಬಳಿ ಇದ್ದ ಬೈನೆ ಮರವನ್ನು ನೆಲಕ್ಕೆ ಕಡೆವಿದೆ. ಈ ವೇಳೆ ಮರ ಪ್ರಶಾಂತ್ ಅವರ ಮನೆಯ ಮೇಲೆ ಬಿದ್ದಿದ್ದು, ಮನೆ ಮಂದಿ ಮತ್ತೊಂದು ಕೊಠಡಿಯಲ್ಲಿದ್ದ ಪರಿಣಾಮ ದೊಡ್ಡ ದುರಂತ ತಪ್ಪಿದೆ.
ಆದರೆ ಮನೆಯ ಗೋಡೆ ಹಾಗೂ ಛಾವಣಿಗೆ ಹಾಕಿದ್ದ ಶೀಟುಗಳಿಗೆ ಭಾರೀ ಹಾನಿಯಾಗಿದೆ. ಬೈನೆ ಮರವನ್ನು ಕೆಡವಿದ ಕಾಡಾನೆ ರಾತ್ರಿ ಇಡೀ ಬೈನೆ ಮರದ ಸೊಪ್ಪು, ತಿರುಳನ್ನು ತಿಂದು ಹಾಕಿದೆ. ಮನೆ ಪಕ್ಕದಲ್ಲೇ ಆನೆ ಇದ್ದರೂ ಪ್ರಶಾಂತ್ ಹಾಗೂ ಮನೆ ಮಂದಿ ಮನೆಯಿಂದ ಹೊರ ಬಾರದೇ ರಾತ್ರಿ ಇಡೀ ಪ್ರಾಣಭೀತಿಯಲ್ಲೇ ಕಾಲ ಕಳೆದಿದ್ದಾರೆ. ಬೈನೆ ಮರವನ್ನು ಪೂರ್ತಿಯಾಗಿ ತಿಂದು ಕಾಡಾನೆ ಸ್ಥಳದಿಂದ ಹೊರಟು ಹೋಗಿದೆ ಎಂದು ತಿಳಿದು ಬಂದಿದೆ.
ಆನೆಗಳ ಜಲಕ್ರೀಡೆ ವಿಡಿಯೋ ವೈರಲ್; ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಹಿಂಡು ಕಂಡಿವೆ. ಆದರೆ ಈ ಬಾರಿ ಯಾವುದೇ ಹಾನಿ ಮಾಡಿಲ್ಲ, ಬದಲಾಗಿ ಹಿನ್ನೀರಿನಲ್ಲಿ ಜಲಕ್ರೀಡೆಯಲ್ಲಿ ತಲ್ಲೀನವಾಗಿವೆ. ಎನ್. ಆರ್. ಪುರ ತಾಲೂಕಿನ ಕುಸುಬೂರು ಗ್ರಾಮದ ಕೆರೆಯಲ್ಲಿ ಬೀಡುಬಿಟ್ಟಿರುವ 12 ಕಾಡಾನೆಗಳ ಹಿಂಡು ಜಲಕ್ರೀಡೆಯಲ್ಲಿ ತೊಡಗಿದ್ದವು. ತನ್ನ ಮರಿಗಳ ಜೊತೆ ನೀರಲ್ಲಿ ಈಜಾಡುತ್ತಾ, ಕಾಲ ಕಳೆದ ಕಾಡಾನೆಗಳ ಹಿಂಡಿನ ದೃಶ್ಯವನ್ನು ಜನರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. 0
ಕಾಡಾನೆಗಳ ಕಂಡು ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳು ನರಸಿಂಹರಾಜಪುರದ ಭದ್ರಾ ಹಿನ್ನೀರಿನ ಕುಸುಬೂರು, ಮುತ್ತಿನಕೊಪ್ಪ, ಸಾತ್ಕೋಳ, ಮುಂಡುಗೋಡು ಸೇರಿದಂತೆ ಹತ್ತಾರು ಹಳ್ಳಿಯ ಜನರಲ್ಲಿ ಆತಂಕ ಮೂಡಿಸಿವೆ.
ಹಾಸನದಲ್ಲಿ ಕಾಡಾನೆ ದಾಳಿ; ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ ಘಟನೆ ಹಾಸನದಲ್ಲಿ ನಡೆದಿದೆ. ಬೈಕ್‌ನಿಂದ ಇಳಿದ ರೈತನನ್ನು ಅರ್ಧ ಕಿಲೋಮೀಟರ್‌ವರೆಗೂ ಆನೆ ಅಟ್ಟಿಸಿಕೊಂಡು ಹೋಗಿದೆ.
ಸಕಲೇಶಪುರ ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರುದ್ರೇಗೌಡ ಎಂಬುವವರು ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಓಡಿ ಸುಸ್ತಾಗಿ ಕೆಳಗೆ ಬಿದ್ದ ರುದ್ರೇಗೌಡರನ್ನು ಸ್ಥಳೀಯರು ನೀರು ಕುಡಿಸಿ ಸಂತೈಸಿದರು.
ಕಾಡಾನೆ ರಸ್ತೆ ಪಕ್ಕದ ಕಾಫಿ ತೋಟದೊಳಗೆ ಹೋಗಿದೆ ಎಂಬ ಮಾಹಿತಿ ಇದೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ಮಾಡಿದರು.












Click it and Unblock the Notifications