ಸರ್ಕಾರಿ ಶಾಲೆಯ ಅವ್ಯವಸ್ಥೆ: ವಿದ್ಯಾರ್ಥಿಗಳು ನೀರು ಹೊತ್ತು ತಂದರಷ್ಟೇ ಮಧ್ಯಾಹ್ನದ ಬಿಸಿಯೂಟ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಶಾಲೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಶಾಲೆಗೆ ಬಂದು ವಿದ್ಯೆ ಕಲಿಬೇಕು ಎಂದರೆ ಹೀಗೆ ನೀರು ಹೊರಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಮಕ್ಕಳಷ್ಟೇ ಅಲ್ಲ. ಅವರ ಹೆತ್ತವರು ಕೂಡ ನೀರು ಹೊರಬೇಕು.
ಚಿಕ್ಕಮಗಳೂರು, ಮಾರ್ಚ್ 8: ಅದೊಂದು ಗ್ರಾಮಾಂತರ ಸ್ಥಳದಲ್ಲಿರುವ ಸರ್ಕಾರಿ ಶಾಲೆ. ಈ ಶಾಲೆಯಲ್ಲಿ ಹೆಚ್ಚೆಂಧರೆ 25 ಜನ ವಿದ್ಯಾರ್ಥಿಗಳು ಇರಬಹುದು. ಆದರೆ ಇರುವ ವಿದ್ಯಾರ್ಥಿಗಳೇ ಓದಬೇಕು ಎಂದರೆ ಆ ಮಕ್ಕಳ ಜೊತೆ ಅವರ ಹೆತ್ತವರು ಕೂಡ ಶಾಲೆಗಾಗಿ ನೀರು ಹೊರಬೇಕು. ಜಿಲ್ಲೆಯ ಸುಂಕಶಾಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಶಾಲೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಶಾಲೆಗೆ ಬಂದು ವಿದ್ಯೆ ಕಲಿಬೇಕು ಎಂದರೆ ಹೀಗೆ ನೀರು ಹೊರಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಮಕ್ಕಳಷ್ಟೇ ಅಲ್ಲ. ಅವರ ಹೆತ್ತವರು ಕೂಡ ನೀರು ಹೊರಬೇಕು. ಆರಂಭದಲ್ಲಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇತ್ತು. ಸರ್ಕಾರಿ ಶಾಲೆಯನ್ನು ಉಳಿಸಬೇಕೆಂಬ ಶಿಕ್ಷಕರ ಹೋರಾಟದ ಫಲವಾಗಿ ಇಂದು 25ಕ್ಕೂ ಹೆಚ್ಚು ಓದುತ್ತಿದ್ದಾರೆ.

ಈ ಸರ್ಕಾರಿ ಶಾಲೆಯಲ್ಲಿ ಸೂಕ್ತವಾದ ಮೂಲಭೂತ ಸೌಲಭ್ಯ ಅಲ್ಲ. ಕಡೇ ಪಕ್ಷ ಕುಡಿಯುವ ನೀರನ್ನೂ ಸಹ ಕೊಡುತ್ತಿಲ್ಲ. ಇದರಿಂದ ಮಕ್ಕಳೇ ದಿನಂ ಪ್ರತಿ ಬೆಳಗ್ಗೆ ಬೇಗ ಬಂದು ಶಾಲೆಗೆ ನೀರು ತಂದರೆ ಮಾತ್ರ ಬಿಸಿಯೂಟ ಸೇರಿದಂತೆ ಎಲ್ಲದಕ್ಕೂ ನೀರು. ಈ ಶಾಲೆಯಲ್ಲಿ 2015ರಿಂದಲೂ ಇದೇ ಪರಿಸ್ಥಿತಿ. ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಪೋಷಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಅನೇಕ ಯೋಜನೆಗಳನ್ನು ಕೊಡುತ್ತಿದೆ. ಆದರೆ ಮೂಲಭೂತ ಸೌಲಭ್ಯ ಮಾತ್ರ ನೀಡುತ್ತಿಲ್ಲ. ಶಾಲೆಗೆ ನೀರು ಪೂರೈಕೆ ಮಾಡುವ ಪೈಪ್‍ಲೈನ್ ಹಾಳಾಗಿ ಶಾಲೆಗೆ ನೀರು ಇಲ್ಲದಂತಾಗಿದೆ. ಇದರಿಂದಾಗಿ ಶಾಲಾ ಮಕ್ಕಳು, ಕೆಲ ಮಕ್ಕಳ ಪೋಷಕರು, ಅಡಿಗೆ ಸಿಬ್ಬಂದಿ ಸುಮಾರು ಅರ್ಧ, ಒಂದು ಕಿ.ಮೀ. ದೂರದ ನಲ್ಲಿಯಿಂದ ನೀರು ತರುವಂತಾಗಿದೆ.

ಸರ್ಕಾರ ಸರ್ಕಾರಿ ಶಾಲೆಗಳು ಏಕೆ ಬಾಗಿಲು ಹಾಕುತ್ತಿವೆ ಎಂದು ಯೋಚಿಸುತ್ತಿದೆ. ಆದರೆ, ಸರ್ಕಾರಿ ಶಾಲೆಗಳಿಗೆ ನಾವು ಎಷ್ಟರ ಮಟ್ಟಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿದ್ದೇವೆ ಎನ್ನುವುದನ್ನು ಯೋಚಿಸುತ್ತಿಲ್ಲ. ಅದರಲ್ಲೂ ಮಲೆನಾಡಲ್ಲಿ ಸಾರಿಗೆ ಸೌಲಭ್ಯ, ಶಿಕ್ಷಕರ ಕೊರತೆ, ಕೊಠಡಿ ಸಮಸ್ಯೆ ಸೇರಿದಂತೆ ಮಕ್ಕಳು ಓದಲು ಹತ್ತಾರು ಸಮಸ್ಯೆಗಳಿವೆ. ಅದರಲ್ಲಿ ಇದೂ ಒಂದು. ಇದು ಹೀಗೆ ಮುಂದುವರೆದರೆ ಮಲೆನಾಡಲ್ಲಿ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವುದರಲ್ಲಿ ಅನುಮಾನವಿಲ್ಲ.
ಕಾಫಿನಾಡಲ್ಲಿ ಕಳೆದ 10 ವರ್ಷದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಅದಕ್ಕೆ ಕಾರಣ ಹಲವಾರಿದ್ದು, ಬಹುತೇಕ ಶಾಲೆಗಳು ಮೂಲಭೂತ ಸೌಕರ್ಯದ ಕೊರತೆಯಿಂದ ಅಂತ್ಯ ಕಂಡಿವೆ. ದೇಶದ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದ ಮೇಲೆ ನಿಂತಿದೆ ಎಂದು ವೇದಿಕೆ ಮೇಲೆ ಭಾಷಣ ಮಾಡುವ ಅಧಿಕಾರಿಗಳು ಹಾಗೂ ಜನನಾಯಕರು ಇತ್ತ ಗಮನ ಹರಿಸಬೇಕಿದೆ.
ಸರ್ಕಾರ ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್, ಬುಕ್, ಬಟ್ಟೆ, ಮೊಟ್ಟೆ ಕೊಡುವುದರ ಜೊತೆ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಅತ್ಯಮೂಲ್ಯ. ಮೊದಲು ಅದನ್ನು ಸರ್ಕಾರ ಮೂಡಿಗೆರೆ ತಾಲೂಕಿನ ಸುಂಕಶಾಲೆ ಗ್ರಾಮದ ಸರ್ಕಾರಿ ಶಾಲೆಗೆ ನೀಡಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications