ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್, ಆಶ್ರಮದ ಸಿಬ್ಬಂದಿ ಹೇಳಿದ್ದೇನು?
ಚಿಕ್ಕಮಗಳೂರು, ಅಕ್ಟೋಬರ್, 25: ವರ್ತೂರ್ ಸಂತೋಷ್ ಬಂಧನದ ಬಳಿಕ ರಾಜ್ಯದಲ್ಲಿ ಹುಲಿ ಉಗುರಿನ ಸದ್ದು ಜೋರಾಗಿಯೇ ಇದೆ. ಇದೀಗ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಯಲ್ಲಿರುವ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರುವ ಫೋಟೋ ವೈರಲ್ ಆಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೂಗುಗಳು ಎದ್ದಿದ್ದವು.
ಶಿವಮೊಗ್ಗ ಮೂಲದ ಅಮರೇಂದ್ರ ಎಂಬುವವರು 2 ವರ್ಷದ ಹಿಂದೆ ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ವಿನಯ್ ಗುರೂಜಿಗೆ ಹುಲಿ ಚರ್ಮವನ್ನು ಉಡುಗೊರೆ ನೀಡಿದ್ದರು. ಅಮರೇಂದ್ರ ಅವರ ತಂದೆ ಕಾಲದಿಂದಲೂ ಅವರ ಮನೆತಲ್ಲಿದ್ದ ಹುಲಿ ಚರ್ಮವನ್ನು ವಿನಯ್ ಗುರೂಜಿಗೆ ನೀಡಿದ್ದರು. ಇನ್ನು ವಿನಯ್ ಗುರೂಜಿ ಅವರು 2022ರಲ್ಲಿ ಅದನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿದ್ದರು ಎಂದು ಆಶ್ರಮ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.

ಅಮರೇಂದ್ರ ಅವರು ಹುಲಿ ಚರ್ಮ ದಾನ ಮಾಡುವ ಕುರಿತು 2019ರಲ್ಲಿ ಶಿವಮೊಗ್ಗ ಉಪ ಅರಣ್ಯಾಧಿಕರಿಗೆ ಪತ್ರ ಬರೆದು ಪರವಾನಗಿ ಪಡೆದುಕೊಂಡಿದ್ದರು. ಪರವಾನಿಗೆ ಪಡೆದುಕೊಂಡೇ ಗೌರಿಗದ್ದೆ ದತ್ತಾಶ್ರಮ ಹುಲಿ ಚರ್ಮ ನೀಡಲಾಗಿತ್ತು. ನಂತರ ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಗುರೂಜಿ ಫೋಟೋ ವಿವಾದಕ್ಕೆ ಕಾರಣ ಆಗಿತ್ತು. ಬಳಿಕ ಅದನ್ನು ವಿನಯ್ ಗುರೂಜಿ ಅವರೇ ಅಮರೇಂದ್ರ ಅವರಿಗೆ ಹಿಂತಿರುಗಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ನಂತರ ಹುಲಿ ಚರ್ಮವನ್ನು ಇಟ್ಟುಕೊಳ್ಳಲು ಸಾಧ್ಯ ಆಗುತ್ತಿಲ್ಲ ಎಂದು ಪತ್ರ ಅಮರೇಂದ್ರ ಅವರು ಅರಣ್ಯ ಇಲಾಖೆಗೆ ಪತ್ರ ಬರೆದು 2023ರಲ್ಲಿ ಶಿವಮೊಗ್ಗ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಹುಲಿ ಉಗುರುಳ್ಳ ಡಾಲರ್ ಹಾಕಿಕೊಂಡಿದ್ದರಿಂದ ಅವರನ್ನು ಪೊಲೀಸರು ಬಂಧಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇತರೆ ಸೆಲೆಬ್ರಿಟಿಗಳು ಹಾಕಿಕೊಂಡಿರುವ ಹುಲಿ ಉಗುರಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇವರ ಬಂಧನ ಯಾವಾಗ ಎನ್ನುವ ಪ್ರಶ್ನೆಗಳು ಎದ್ದಿದ್ದವು.
ಇದೇ ರೀತಿಯ ವಿವಾದದ ಸುಳಿಯಲ್ಲಿ ಹಲವರು ಸಿಲುಕಿದ್ದಾರೆ. ಬೆಂಗಳೂರಿನಲ್ಲಿರುವ ಸರ್ವಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ನಾಯಕ್ ಎಂಬುವವರು ವಿನಯ್ ಗುರೂಜಿ ಹಾಗೂ ನಟ ದರ್ಶನ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ, ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆಯಾಗಿದೆ ಎನ್ನುವ ಆಕ್ರೋಶಗಳು ಕೂಡ ಭುಗಿಲೆದ್ದಿವೆ.
ಇನ್ನು ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಣೆ ನಡೆಸಿ. ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನುವುದನ್ನು ಪರಿಶೀಲನೆ ಮಾಡುವುದು ಅರಣ್ಯಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳುತ್ತಿದ್ದಾರೆ.
ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ, ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆಯಿದೆ.












Click it and Unblock the Notifications