ಚಿಕ್ಕಮಗಳೂರು; ಯೋಧ ಶೇಷಪ್ಪಗೆ ಕಣ್ಣೀರ ವಿದಾಯ
ಚಿಕ್ಕಮಗಳೂರು, ನವೆಂಬರ್ 09; ಕಡೂರು ತಾಲೂಕಿನ ಬಿಳವಾಲ ಗ್ರಾಮದ ಯೋಧ ಬಿ. ಕೆ. ಶೇಷಪ್ಪ ಅಂತ್ಯಕ್ರಿಯೆ ಅವರ ತೋಟದಲ್ಲಿ ನಡೆಯಿತು. ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರವಾದ ಗಾಯವಾಗಿದ್ದ ಯೋಧ ಶೇಷಪ್ಪ ಕೋಮಾಕ್ಕೆ ಜಾರಿದ್ದರು, ನಾಲ್ಕು ದಿನದ ಬಳಿಕ ಮೃತಪಟ್ಟಿದ್ದರು.
ಗಡಿಭದ್ರತಾ ಪಡೆಯ ಗೌರವದೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿಳವಾಲ ಗ್ರಾಮದ ಯೋಧ ಶೇಷಪ್ಪ (45) ಅಂತ್ಯಕ್ರಿಯೆ ಅವರ ತೋಟದಲ್ಲಿ ನಡೆಯಿತು. ಬಿಎಸ್ಎಫ್ ಯೋಧರ ಶೋಕಗೀತೆ ಬಳಿಕ ಮೃತ ಯೋಧನ ಗೌರವಾರ್ಥ ಮೂರು ಸುತ್ತು ಕುಶಾಲತೋಪು ಹಾರಿಸಲಾಯಿತು.
ಕಡೂರು; 21 ವರ್ಷ ದೇಶ ಸೇವೆ ಮಾಡಿದ ಯೋಧನಿಗೆ ಅದ್ಧೂರಿ ಸ್ವಾಗತ
ಬಳಿಕ ಸಂಪ್ರಾದಾಯಿಕ ವಿಧಿ-ವಿಧಾನಗಳ ಮೂಲಕ ಶೇಷಪ್ಪ ಹಿರಿಯ ಮಗ ಹರ್ಷ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಸೇರಿದ್ದ ನೂರಾರು ಗ್ರಾಮಸ್ಥರು ಶೇಷಪ್ಪ ಅಮರ್ ರಹೇ ಎಂದು ಘೋಷಣೆ ಕೂಗಿದರು.
ಕಡೂರು; ಸಖರಾಯಪಟ್ಟಣ ಪೊಲೀಸರ ವಿರುದ್ಧ ಜನರ ಪ್ರತಿಭಟನೆ
ಶೇಷಪ್ಪ ಪಾರ್ಥಿವ ಶರೀರಕ್ಕೆ ಹೊದೆಸಿದ್ದ ರಾಷ್ಟ್ರಧ್ವಜವನ್ನು ಬಿಎಸ್ಎಫ್ ಅಧಿಕಾರಿ ಶೇಷಪ್ಪ ಪತ್ನಿ ಛಾಯಾಗೆ ಹಸ್ತಾಂತರ ಮಾಡಿದರು. ಈ ವೇಳೆ ಪತಿಯ ದೇಹಕ್ಕೆ ಪತ್ನಿ ಛಾಯಾ ಕಣ್ಣೀರಿಡುತ್ತಲೇ ಸೆಲ್ಯೂಟ್ ಮಾಡಿದಾಗ ನೆರೆದಿದ್ದ ಜನರ ಕಣ್ಣಲ್ಲೂ ನೀರು ಜಿನುಗಿತು.
ವಾಯುಸೇನೆಯಲ್ಲಿದ್ದ ಕರ್ನಾಟಕದ ಯೋಧ ಏಕನಾಥ ಶೆಟ್ಟಿ ಕಣ್ಮರೆಯಾಗಿ 5 ವರ್ಷ
ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಶೇಷಪ್ಪನವರ ಪಾರ್ಥಿವ ಶರೀರವನ್ನು ಕಡೂರಿನ ವೆಂಕಟೇಶ್ವರ ದೇಗುಲದ ಬಳಿಗೆ ತರಲಾಯಿತು. ಸೇನಾ ವಾಹನದಿಂದ ತೆರೆದ ವಾಹನಕ್ಕೆ ಮೃತದೇಹವನ್ನ ಸ್ಥಳಾಂತರಿಸಿ ಕೆ.ಎಲ್.ವಿ. ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಯ ಎರಡೂ ಬದಿಯಲ್ಲೂ ಭಾರತದ ಧ್ವಜ ಹಿಡಿದು ನಿಂತು ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮೃತದೇಹ ಮಲ್ಲೇಶ್ವರ ಗ್ರಾಮದ ಮಾರ್ಗವಾಗಿ ಮೆರವಣಿಗೆ ಮೂಲಕ ಬಿಳುವಾಲ ತಲುಪಿತು.

ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಜನರು ಅಂತಿಮ ದರ್ಶನ ಪಡೆದರು. ತಾಲೂಕಿನ ಗಡಿಗ್ರಾಮಕ್ಕೆ ಮೃತದೇಹ ಬಂದಾಗ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಜೆ. ಉಮೇಶ್ ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.
ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಯೋಧನ ಪಾರ್ಥಿವ ಶರೀರವಿದ್ದ ಪೆಟ್ಟಿಗೆ ಮೇಲೆ ಹೂಗುಚ್ಚವನ್ನರಿಸಿ ಗೌರವ ಸಲ್ಲಿಸಿದರು. ಭಾನುವಾರ ರಾತ್ರಿ ಜಮ್ಮುವಿನಿಂದ ಮೃತದೇಹ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿತು.
ವಿಮಾನ ನಿಲ್ದಾಣದಲ್ಲಿದ್ದ ಮಾಜಿ ಶಾಸಕ ವೈ. ಎಸ್. ವಿ.ದತ್ತ ಅಲ್ಲಿಂದ ಪಾರ್ಥಿವ ಶರೀರದ ಜೊತೆಗೆ ಶೇಷಪ್ಪನವರ ಸ್ವಗ್ರಾಮ ಬಿಳವಾಲಕ್ಕೆ ಬಂದು ಅಂತ್ಯ ಸಂಸ್ಕಾರ ನಡೆಯುವ ತನಕವೂ ಕುಟುಂಬದವರ ಜೊತೆಯೇ ಇದ್ದರು.
ಗಂಭೀರವಾಗಿ ಗಾಯಗೊಂಡಿದ್ದರು; ಶೇಷಪ್ಪ ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರ ಗಾಯವಾಗಿತ್ತು. ಕೋಮಾಗೆ ಜಾರಿದ್ದ ಅವರು ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದರು.
ಕಡೂರು ತಾಲೂಕಿನ ಶೇಷಪ್ಪ ಕಳೆದ 20 ವರ್ಷಗಳಿಂದ ಗಡಿ ಭದ್ರತಾ ಪಡೆಯ ಮ್ಯಾಕನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಾಹನ ರಿಪೇರಿ ಮಾಡುವಾಗ ಗಾಯಗೊಂಡಿದ್ದ ಅವರಿಗೆ ವೈಷ್ಣೋದೇವಿ ಬಳಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಶೇಷಪ್ಪ ಪರಿಸ್ಥಿತಿ ಗಂಭೀರವಾಗಿರುವ ವಿಚಾರ ತಿಳಿದ ತಕ್ಷಣ ಬಿಳವಾಲದಿಂದ ಅವರ ಹಿರಿಯ ಸಹೋದರ ಪ್ರಕಾಶ್ ಜಮ್ಮುವಿಗೆ ತೆರಳಿದ್ದರು. ಶೇಷಪ್ಪ ಆರೋಗ್ಯ ಚೇತರಿಕೆಗಾಗಿ ಗ್ರಾಮಸ್ಥರು ಹಾಗೂ ಸ್ನೇಹಿತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.
ಆದರೆ ಗ್ರಾಮಸ್ಥರ ಪ್ರಾರ್ಥನೆ ಫಲ ಕೊಡದೇ ಶೇಷಪ್ಪ ಮೃತಪಟ್ಟಿದ್ದರು. ಗ್ರಾಮದ ಯೋಧನ ನಿಧನದ ಸುದ್ದಿಯಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಶೇಷಪ್ಪ ಕಡೂರು ತಾಲ್ಲೂಕಿನ ಬಿಳವಾಲ ಗ್ರಾಮದ ಕೇಶವಪ್ಪ ಮತ್ತು ಮಾಳಮ್ಮ ಅವರ 2ನೇ ಪುತ್ರ. ಅವರಿಗೆ ಪತ್ನಿ ಮತ್ತು ಎರಡು ಮಕ್ಕಳಿದ್ದಾರೆ.