ಸಂತವೇರಿ ಘಾಟ್ ಬಳಿ ಒಂಟಿ ಸಲಗದಿಂದ ಪ್ರಯಾಣಿಕರನ್ನು ಪಾರು ಮಾಡಿದ ಚಾಲಕ!
ಚಿಕ್ಕಮಗಳೂರು, ಮೇ.05:ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವೆಡೆ ಆನೆಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಆಹಾರ ಅರಸಿ ನಾಡಿಗೆ ಬರುವ ಆನೆಗಳು ಭಯಕ್ಕೆ ಎದುರಿಗೆ ಸಿಕ್ಕವರನ್ನು ಅಟ್ಟಿಸಿಕೊಂಡು ಬರುವುದು ಸಾಮಾನ್ಯವಾಗಿದೆ.
ಇದೀಗ ಚಿಕ್ಕಮಗಳೂರಿನಲ್ಲಿ ಕೆಎಸ್ಆರ್ ಟಿ ಸಿ ಬಸ್ ಗೆ ಅಡ್ಡ ಹಾಕಿದ ಒಂಟಿ ಸಲಗ, ಒಂದು ಕಿ.ಮೀ.ಬಸ್ ಅನ್ನು ಹಿಂಬಾಲಿಸಿ ಬಂದಿದೆ. ತಾಲೂಕಿನ ಸಂತವೇರಿ ಘಾಟ್ ಬಳಿ ಈ ಘಟನೆ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ.
ಹೌದು, ಆನೆ ಬಸ್ ಹಿಂಬಾಲಿಸಿ ಬಂದಾಗ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲಾ ಗಾಬರಿಯಾಗಿದ್ದಾರೆ. ಆಗ ಒಂದು ಕಿ.ಮೀ.ಹಿಮ್ಮುಖವಾಗಿ ಬಸ್ ಚಲಾಯಿಸಿದ ಚಾಲಕ, ಪ್ರಯಾಣಿಕರನ್ನು ರಕ್ಷಿಸಿದ್ದಾನೆ.

ನಡು ರಸ್ತೆಯಲ್ಲಿ ಬಸ್ ಹಿಂಬಾಲಿಸಿಕೊಂಡು ಒಂದು ಕಿ.ಮೀ.ನಡೆದು ಬಂದು ನಂತರ ಒಂಟಿ ಸಲಗ ಕಾಡಿನೊಳಗೆ ಮರೆಯಾಗಿದೆ. ಈ ಘಟನೆಯ ನಂತರ ಚಾಲಕ, ನಿರ್ವಾಹಕನ ಸಮಯ ಪ್ರಜ್ಞೆ ಕಂಡು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ ಒಂಟಿ ಸಲಗದ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ.












Click it and Unblock the Notifications