ನಗರಸಭೆಯಲ್ಲಿ ಅಕ್ರಮ ಖಾತೆ ಆರೋಪ: ದ್ವಿತೀಯ ದರ್ಜೆ ಸಹಾಯಕರು ಅಮಾನತು
ಚಿಕ್ಕಮಗಳೂರು, ಜೂನ್ 08: ನಗರಸಭೆಯಲ್ಲಿ ಅಕ್ರಮ ಖಾತೆ ಮಾಡಿದ ಆರೋಪದಡಿಯಲ್ಲಿ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಅಮಾನತ್ತುಗೊಳಿಸಿ ಆದೇಶಿಸಿ, ಐದು ಜನ ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳಲು ಇಲಾಖೆ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.
ನಗರಸಭೆ ಕಚೇರಿಗೆ ದಿಢೀರ್ ಬೇಟಿ ನೀಡಿದ ಜಿಲ್ಲಾಧಿಕಾರಿ ಕಡತಗಳನ್ನು ಪರಿಶೀಲಿಸಿ, ಕಡತಗಳಲ್ಲಿ ಲೋಪಗಳು ಕಂಡುಬಂದ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ತಾಲೂಕಿನ ಇಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ ಪ್ರದೇಶಗಳನ್ನು 1995-96ರಲ್ಲಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದ್ದು, ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಇಂದಾವರ ಗ್ರಾಮ ಪಂಚಾಯತ್‌ನ ಕೆಲವು ಸರ್ವೇ ನಂ. ನಗರಸಭೆಗೆ ಸೇರದಿದ್ದರೂ ಅಕ್ರಮವಾಗಿ ನಗರಸಭೆ ವ್ಯಾಪ್ತಿಯಲ್ಲಿ ನೋಂದಣಿ ಮಾಡಿದ್ದಾರೆ ಎಂದರು.
ಅದನ್ನು ಬೇರೆಯವರ ಹೆಸರಿಗೆ ಖಾತೆಗಳನ್ನು ಮಾಡಿದ್ದಾರೆ. ಇಂತಹ 51 ಖಾತೆಗಳನ್ನು ಅಕ್ರಮವಾಗಿ ಮಾಡಿ ನಗರ ಸಭೆ ವ್ಯಾಪ್ತಿಗೆ ಸೇರಿಸಿದ್ದು, ಈ ಸಂಬಂಧ ಸಾರ್ವಜನಿಕರಿಂದ ದೂರು ಬಂದಿತ್ತು. ದೂರು ಪರಿಶೀಲಿಸಿ ವರದಿ ನೀಡುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದ್ದು, ಅವರು ನೀಡಿದ ವರದಿಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಭೀತಾಗಿರುವ ಹಿನ್ನಲೆಯಲ್ಲಿ ನಗರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಾದೇವ್ ಹಾಗೂ ಆಶಾ ಎಂಬುವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿರುವುದಾಗಿ ತಿಳಿಸಿದರು.
ಪ್ರಕರಣದಲ್ಲಿ ಈ ಹಿಂದೆ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು ಸದ್ಯ ಬೇರೆಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು, ಮಮತಾ, ರವಿ, ಬಸವರಾಜು, ಶಿವಾನಂದ ಎಂಬ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಹೆಚ್ಚಿನ ತನಿಖೆ ನಡೆಸಿ ಆಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಇಲಾಖೆಯಲ್ಲಿನ ಅಧಿಕಾರಿಗಳ ಮತ್ತು ಸಿಬ್ಬಂದಿ ಭ್ರಷ್ಟಾಚಾರ ನಡೆಸಲು ಅವಕಾಶ ನೀಡುವುದಿಲ್ಲ. ಹಣಕ್ಕಾಗಿ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ಸಹಿಸುವುದಿಲ್ಲ. ಅಂತಹ ಅಧಿಕಾರಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಮೂಡಿಗೆರೆ ತಾಲೂಕಿನಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪದಡಿಯಲ್ಲಿ 7 ಜನ ಕಂದಾಯ ಇಲಾಖೆ ಅಧಿಕಾರಿಗಳನ್ನು ಜೈಲು ಕಳುಹಿಸಲಾಗಿದೆ. ಅಕ್ರಮವಾಗಿ ಮಂಜೂರು ಮಾಡಿದ್ದ ಸುಮಾರು 950 ಎಕರೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಭ್ರಷ್ಟ ಅಧಿಕಾರಿ, ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದರು.












Click it and Unblock the Notifications