ಮೀಸಲು ಅರಣ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಆದೇಶ: ಮಲೆನಾಡಿನ ಗಿರಿಜನರ ಬದುಕು ಅತಂತ್ರ
ಚಿಕ್ಕಮಗಳೂರು, ಅಕ್ಟೋಬರ್ 13 : ಮೀಸಲು ಅರಣ್ಯ ಹೆಚ್ಚಿಸುವ ರಾಜ್ಯ ಸರ್ಕಾರದ ನಡೆ ವಿರುದ್ಧ ಕಿಡಿಕಾರಿರುವ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕಿನ ಹರಿಜನ-ಗಿರಿಜನ ಹಾಗೂ ಕಾಡಿನ ಮಕ್ಕಳು ಸರ್ಕಾರದ ವಿರುದ್ಧ ಬಿಲ್ಲು-ಬಾಣದ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳು ಮಲೆನಾಡಲ್ಲಿ ಬದುಕಿಗಾಗಿ ಬಡಜನರು ಮಾಡಿದ ಒಂದು-ಎರಡು ಎಕರೆ ಒತ್ತುವರಿ ಭೂಮಿಯನ್ನು ತೆರವಿಗೆ ಮುಂದಾಗಿದ್ದಾರೆ. ಆದರೆ ಯಾವುದೇ ಒತ್ತುವರಿ ಭೂಮಿಯನ್ನು ತೆರವು ಮಾಡಬೇಕಾದರೆ 90 ದಿನಗಳ ಮುಂಚೆ ನೋಟೀಸ್ ನೀಡುವುದು ಸರ್ಕಾರದ ನಿಯಮವಾಗಿದೆ.

ಕಾಫಿನಾಡ ಅರಣ್ಯ ಅಧಿಕಾರಿಗಳು ಹಕ್ಕುಪತ್ರ ಇರುವ ಭೂಮಿಗೂ ಯಾವುದೇ ನೋಟೀಸ್ ನೀಡದೆ, ಏಕಾಏಕಿ ಬಂದು ಹೇಳದೆ-ಕೇಳದೆ ತೆರವು ಮಾಡಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಆದೇಶ ಮಾಡಿದ್ದು ಯಾರು. ಈ ಸರ್ಕಾರಕ್ಕೆ ಮಾನ-ಮರ್ಯದೆ ಇದ್ಯಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಲೆನಾಡು ಭಾಗದಲ್ಲಿ ರಾಜಕಾರಣಿಗಳೇ ನೂರಾರು ಎಕರೆ ಒತ್ತುವರಿ ಮಾಡಿ, ಬಿಲ್ಡಿಂಗ್ ಕಟ್ಟಿದ್ದಾರೆ. ನಿಮಗೆ ತಾಕತ್ ಇದ್ದರೆ ಅಂತವರ ಒತ್ತುವರಿಯನ್ನ ತೆರವು ಮಾಡಿ ಕಾಡನ್ನು ಉಳಿಸಿ-ಬೆಳೆಸಿ. ಬದುಕಿಗಾಗಿ ಒಂದು-ಎರಡು ಒತ್ತುವರಿ ಮಾಡಿರುವ ಬಡವರ ಮೇಲಲ್ಲ ನಿಮ್ಮ ಬ್ರಹ್ಮಾಸ್ತ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹಕ್ಕುಪತ್ರ ಇದ್ದರೆ ಖುಲ್ಲಾ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ನೀವು ಅದನ್ನೂ ಉಲ್ಲಂಘನೆ ಮಾಡ್ತಿದ್ದೀರಾ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿರುವ 22% ಇರುವ ಅರಣ್ಯವನ್ನ 33% ಮಾಡಬೇಕೆಂದು ಹೊರಟಿರುವ ಸರ್ಕಾರದ ವಿರುದ್ಧ ಆದಿವಾಸಿಗಳು ಸಿಡಿದೆದ್ದಿದ್ದಾರೆ.

ನಾವು ಕಾಡಿನ ಮಕ್ಕಳು. ಕಾಡು ಉಳಿಸದವರು ನಾವೇ. ಅರಣ್ಯ ಅಧಿಕಾರಿಗಳಲ್ಲ. ಕಾಡುಪ್ರಾಣಿ-ಮಾನವ ಸಂಘರ್ಷಕ್ಕೆ ಅರಣ್ಯ ಅಧಿಕಾರಿಗಳೇ ಕಾರಣ. ಅವರು ಬೆಳೆಸೋದು ಕೃತಕ ಅರಣ್ಯ. ಅವರ ಅರಣ್ಯದಿಂದ ಒಂದು ಪಕ್ಷಿ ಕೂಡ ಬದುಕಲ್ಲ. ಆದರೆ, ಅರಣ್ಯವನ್ನ ಉಳಿಸಿ-ಬೆಳೆಸಿದ ಕಾಡಿನ ಮಕ್ಕಳನ್ನೇ ಕಾಡಿನಿಂದ ಹೊರಗಟ್ಟುವ ಹುನ್ನಾರ ನಡೆಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರ ಹರಿಜನ-ಗಿರಿಜನ-ಕಾಡಿನಮಕ್ಕಳನ್ನ ಕಾಡಿನಿಂದ ಹೊರಗಟ್ಟಿದರೆ ಜಿಲೆಯಲ್ಲಿ ಕನಿಷ್ಠ ಪಕ್ಷ 15-20 ಸಾವಿರ ಜನ ಬೀದಿಗೆ ಬೀಳುತ್ತಾರೆ. ಪುನರ್ವಸತಿಯನ್ನೂ ಕಲ್ಪಿಸಿಲ್ಲ. ಸುಮ್ಮನೆ ಹಕ್ಕುಪತ್ರ-ದಾಖಲೆ ಇರುವ ಜಮೀನುಗಳನ್ನೂ ಖುಲ್ಲಾ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಬಿಲ್ಲು-ಬಾಣ ಹೊರಬರುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ, ಸರ್ಕಾರ ಅರಣ್ಯ ಪ್ರದೇಶವನ್ನು ಹೆಚ್ಚು ಮಾಡಬೇಕು ಎನ್ನುವುದು ಸಂತೋಷ. ಹಾಗಂತ, ಸಾವಿರಾರು ಜನರನ್ನು ಬೀದಿಗೆ ತಂದರೆ ಅವರು ಎಲ್ಲಿಗೆ ಹೋಗಬೇಕು. ಸರ್ಕಾರ ಒತ್ತುವರಿ ಮಾಡಲೇಬೇಕು ಅನ್ನೋದಾದ್ರೆ ಮಲೆನಾಡಲ್ಲಿ 11 ಲಕ್ಷ ಹೆಕ್ಟೇರ್ ಒತ್ತುವರಿಯಾಗಿದೆ ಎಂಬ ಮಾತಿದೆ. ಅದರಲ್ಲಿ ಸಿಂಹಪಾಲು ರಾಜಕಾರಣಿಗಳದ್ದೇ. ಒಬ್ಬೊಬ್ಬರದ್ದು ನೂರು-ಇನ್ನೂರು ಅಲ್ಲ. ಸಾವಿರ-ಸಾವಿರ ಎಕರೆ ಒತ್ತುವರಿ ಇದೆ. ಅಧಿಕಾರಿಗಲು ಒತ್ತುವರಿ ತೆರವು ಮಾಡಿ ಸರ್ಕಾರ ಆದೇಶ ಪಾಲನೆ ಮಾಡುತ್ತೇವೆ ಅಂದರೆ ಶ್ರೀಮಂತರು-ರಾಜಕಾರಣಿಗಳು ಮಾಡಿರುವ ಸಾವಿರಾರು ಎಕರೆ ಒತ್ತುವರಿಯನ್ನು ತೆರವು ಮಾಡಲಿ. ಸರ್ಕಾರ ಅಧಿಕಾರ ಇದೆ ಎಂದು ಬದುಕಿಗಾಗಿ ಒಂದು-ಎರಡು ಎಕರೆ ಒತ್ತುವರಿ ಮಾಡಿದ ಬಡವರ ಮೇಲೆ ದಬ್ಬಾಳಿಕೆ ಮಾಡೋದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications