ಚಿಕ್ಕಮಗಳೂರು ಮಳೆ: ವಾಹನ ಸವಾರರೇ ರಸ್ತೆಗಿಳಿಯುವ ಮುನ್ನ ಗಮನಿಸಿ
ಚಿಕ್ಕಮಗಳೂರು, ಜೂನ್. 30: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು, ಜಿಲ್ಲಾಡಳಿತ ಹೊಸ ಆದೇಶ ಹೊರಡಿಸಿದೆ. ಇದೇ ಜುಲೈ 05 ರಿಂದ ಜಿಲ್ಲೆಯಾದ್ಯಂತ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ದಿನಾಂಕ 05.07.2024 ರಿಂದ ಜಾರಿಗೆ ಬರುವಂತೆ ಜಿಲ್ಲೆಯಾದ್ಯಂತ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅಧಿಕ ಭಾರ ಹೊತ್ತು ಸಂಚರಿಸುವ (12000 ಕೆಜಿ ಮೇಲ್ಪಟ್ಟ) ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಆದೇಶದಲ್ಲಿ ಏನಿದೆ?
ಚಿಕ್ಕಮಗಳೂರು ಜಿಲ್ಲೆಯಲ್ಲಿ 2023-24 ನೇ ಸಾಲಿನ ಜುಲೈ ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ಅಧಿಕ ಬಾರಹೊತ್ತು ಸಂಚರಿಸುವ ಲಾರಿಗಳ ಓಡಾಟದಿಂದ ಗುಡ್ಡ, ರಸ್ತೆಗಳು, ಮೋರಿ/ಸೇತುವೆಗಳು ಮತ್ತು ಚರಂಡಿಗಳು ಅಧಿಕ ತೇವಾಂಶದಿಂದ ಧಾರಣ ಸಾಮರ್ಥ್ಯ ಕಡಿಮೆಯಾಗಿ ಕುಸಿಯುವ ಸಾಧ್ಯತೆಗಳಿದೆ.
ಈ ಕಾರಣ, ಸಾರ್ವಜನಿಕರ/ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದಿನ ಕೋರಿಕೆವರೆಗೆ ಲೋಕೊಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 12,000 ಕೆ.ಜಿ. ಗೂ ಮೇಲ್ಪಟ್ಟ ಭಾರ ಹೊತ್ತ ವಾಹನಗಳ ಸಂಚಾರವನ್ನು ನಿಷೇದಿಸಿ ಉಲ್ಲೇಖದಂತೆ ಈ ಕಚೇರಿಯಿಂದ ಆದೇಶ ಹೊರಡಿಸಲಾಗಿರುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಹೆಚ್ಚಿನ ಭಾಗವು ಮಲೆನಾಡು ಪ್ರದೇಶವಾಗಿರುತ್ತದೆ. ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಮಾಣಿಕ್ಯಧಾರ, ಗಾಳಿಕೆರೆ, ದಬ್ ದಬೆ ಪಾಲ್ಸ್ ಹಾಗೂ ಇತರೆ ಗಿರಿ ಪ್ರದೇಶಗಳಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಗಾಳಿಯು ವೇಗವಾಗಿ ಬೀಸುತ್ತಿರುತ್ತದೆ.

ಈ ಸಂದರ್ಭದಲ್ಲಿ ಭಾರಿ ವಾಹನಗಳು ಅಧಿಕ ಭಾರವನ್ನು ಹೊತ್ತುಕೊಂಡು ರಸ್ತೆಗಳಲ್ಲಿ ಸಂಚರಿಸಿದಲ್ಲಿ ಭೂ ಕುಸಿತ ಉಂಟಾಗಿ, ಸೇತುವೆಗಳು ಹಾನಿಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವುದಲ್ಲದೇ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯು ಸಹ ಹೆಚ್ಚಾಗುವ ಸಾದ್ಯತೆಗಳು ಇರುತ್ತವೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಚಿಕ್ಕಮಗಳೂರು ಜಿಲ್ಲಾದ್ಯಂತ ಅಧಿಕ ಭಾರವನ್ನು ಹೊತ್ತುಕೊಂಡು ಸಂಚರಿಸುವ (12000 KG ಮೇಲ್ಪಟ್ಟ ವಾಹನಗಳು) ವಾಹನಗಳ ಸಂಚಾರವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಿಸುವುದು ಸೂಕ್ತವೆಂದು ಮನಗಂಡು ಈ ಕೆಳಗಿನಂತೆ ಆದೇಶಿಸಿದೆ.
ಸಿ.ಎನ್.ಮೀನಾ ನಾಗರಾಜ್ ಭಾ.ಆ.ಸೇ., ಜಿಲ್ಲಾದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ಆದ ನಾನು ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989ರ ನಿಯಮ 221(ಎ) (5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ:05-07-2024 ರಿಂದ ಜಾರಿಗೆ ಬರುವಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅಧಿಕ ಭಾರವನ್ನು ಹೊತ್ತು (ಅಂದರೆ 12000 KG ಮೇಲ್ಪಟ್ಟ) ಸಂಚರಿಸುವ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಆದೇಶಿಸಿರುತ್ತೇನೆ. ಈ ಆದೇಶವು ದಿನಾಂಕ:28-06-2024 ರಂದು ನನ್ನ ಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ಹೊರಡಿಸಿರುತ್ತೇನೆ.












Click it and Unblock the Notifications