ಎನ್.ಆರ್‌ಪುರ: ಫುಲ್ ಟೈಟ್ ಆಗಿ ಶಾಸಕರ ಭೇಟಿಗೆ ಬಂದ ಪ್ರಾಂಶುಪಾಲ ಅಮಾನತು
ಚಿಕ್ಕಮಗಳೂರು, ಜೂನ್ 26: ಕುಡಿದ ಮತ್ತಿನಲ್ಲೇ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು ಶಾಸಕರ ಬಳಿ ಮನವಿ ಪತ್ರ ನೀಡಲು ಬಂದು ಕರ್ತವ್ಯದಿಂದ ಅಮಾನತಾದ ಘಟನೆ ಎನ್.ಆರ್ ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ನಡೆದಿದೆ. ಸಿಂಸೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಲೊಕನಾಯ್ಕ ಅಮಾನತಾದ ಪ್ರಾಂಶುಪಾಲ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೊಕನಾಯ್ಕ ವಸತಿ ಶಾಲೆಯ ಸಮಸ್ಯೆ ಕುರಿತು ಮನವಿ ಪತ್ರ ನೀಡಲು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರನ್ನು ಭೇಟಿಯಾಗಲು ಬಂದಿದ್ದರು. ಕುಡಿತ ಮತ್ತಿನಲ್ಲಿದ್ದ ಲೊಕನಾಯ್ಕ ಅವರನ್ನು ನೋಡಿ ಮಾತನಾಡಿದ ಶಾಸಕ ಟಿ.ಡಿ ರಾಜೇಗೌಡ ಅನುಮಾನಗೊಂಡು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ವೈದ್ಯರನ್ನು ಕರೆಸಿ ಬ್ರೀಥಿಂಗ್ ಅಲ್ಕೋಹಾಲ್ ಅನಲೈಸರ್ ಮೂಲಕ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ದೃಢವಾದ ಹಿನ್ನೆಲೆಯಲ್ಲಿ ಕೋಪಗೊಂಡ ಶಾಸಕರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಪ್ರಾಂಶುಪಾಲ ಲೊಕನಾಯ್ಕ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಕರ್ತವ್ಯದ ಸಮಯದಲ್ಲೇ ಮದ್ಯಪಾನ ಮಾಡಿ ಶಾಸರನ್ನು ಭೇಟಿಯಾದ ಪ್ರಾಂಶುಪಾಲ ಲೊಕನಾಯ್ಕ ಕರ್ತವ್ಯದಿಂದ ಅಮಾನತಾಗಿದ್ದಾರೆ.

ನಡು ರಸ್ತೆಯಲ್ಲಿ ಹೊತ್ತಿ ಉರಿದ ಓಮಿನಿ ಕಾರು
ಚಿಕ್ಕಮಗಳೂರು: ಓಮಿನಿ ಕಾರು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ದೊಡ್ಡನನಗುಡ್ಡ ಗ್ರಾಮದ ಬಳಿ ನಡೆದಿದೆ. ವೇಗವಾಗಿ ಬರುತ್ತಿದ್ದ ಓಮಿನಿ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ನೋಡ ನೋಡುತ್ತಿದ್ದಂತೆ ಸಂಪೂರ್ಣ ಕಾರು ನಡುರಸ್ತೆಯಲ್ಲೇ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಏಳು ಜನ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ದೊಡ್ಡನನಗುಡ್ಡ ಗ್ರಾಮದ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದ್ದಾರೆ.












Click it and Unblock the Notifications