ಚಿಕ್ಕಮಗಳೂರಿನಲ್ಲಿ 51ಕ್ಕೂ ಹೆಚ್ಚು ಬಂದೂಕುಗಳು ಪೊಲೀಸರ ವಶಕ್ಕೆ, ಈ ನಿರ್ಧಾರ ಏಕೆ?
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 51ಕ್ಕೂ ಹೆಚ್ಚು ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ, 24: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ, ಮತ್ತು ಪರವಾನಗಿ ಇದ್ದವರ ಬಳಿಯೂ 51ಕ್ಕೂ ಹೆಚ್ಚು ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗಾದರೆ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇತ್ತೀಚಿಗೆ ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಬಿದಿರೆ ಗ್ರಾಮದಲ್ಲಿ ರಮೇಶ್ ಎಂಬಾತ ಬದೂಕಿನಿಂದ ಗುಂಡು ಹಾರಿಸಿದ್ದು, ಇದರ ಪರಿಣಾಮ ಬೈಕ್‍ನಲ್ಲಿ ಹೋಗುತ್ತಿದ್ದ ಸಹೋದರಿಬ್ಬರು ಮೃತಪಟ್ಟಿದ್ದರು. ಈ ಘಟನೆ ಎಚ್ಚೆತ್ತ ಪೊಲೀಸ್ ಇಲಾಖೆ ಅಕ್ರಮ ಬಂದೂಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಂದೂಕುಗಳನ್ನು ವಶಪಡಿಸಿಕೊಂಡಿದ್ದು ಏಕೆ?
ಘಟನೆಯಲ್ಲಿ ಪ್ರವೀಣ್ ಹಾಗೂ ಪ್ರಕಾಶ್ ಮೃತರಾಗಿದ್ದರು. ಘಟನೆಯ ಬಳಿಕ ಕಾರ್ಯ ಪ್ರವೃತ್ತವಾದ ಪೊಲೀಸ್ ಇಲಾಖೆ ಪರವಾನಿಗೆ ಹೊಂದಿರುವ 10 ಬಂದೂಕು ಸೇರಿದಂತೆ ಪರವಾನಿಗೆ ರಹಿತ 41 ಬಂದೂಕು, ಎರಡು ರಿವಾಲ್ವಾರ್‌ಗಳು ವಶಕ್ಕೆ ಪಡೆದಿದೆ. ಹಾಗೂ ಈ ಸಂಬಂಧ 3 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ಬಂದೂಕುಗಳ ವಶ?
ಈ ಸಂಬಂಧ ಬಾಳೆಹೊನ್ನೂರಿನಲ್ಲಿ ಎರಡು, ಬಾಳೂರು ಒಂದು, ಕಳಸ ಎರಡು ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಬಾಳೆಹೊನ್ನೂರಿನಲ್ಲಿ 17, ಬಾಳೂರು 21, ಕಳಸ 2 ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ 1 ಬಂದೂಕು ಸೇರಿದಂತೆ ಒಟ್ಟು 41 ಬಂದೂಕು ಹಾಗೂ ಬಾಳೂರಿನಲ್ಲಿ ಎರಡು ರಿವಲ್ವಾರ್ ಪರವಾನಿಗೆ ಪಡೆಯದಿರುವುದು ಬೆಳಕಿಗೆ ಬಂದಿದೆ. ಒಟ್ಟು 51 ಬಂದೂಕು, ಎರಡು ರಿವಲ್ವಾರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ವೇಳೆ ಬಾಳೆಹೊನ್ನೂರಿನಲ್ಲಿ 2, ಬಾಳೂರು 8 ಪರವಾನಿಗೆ ಹೊಂದಿರುವ ಬಂದೂಕುಗಳು ಪತ್ತೆಯಾಗಿವೆ. ಬಾಳೆಹೊನ್ನೂರು ಮತ್ತು ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂದೂಕು ದುರಸ್ಥಿಪಡಿಸುವ ಸ್ಥಳದ ಮೇಲೆ ದಾಳಿ ನಡೆಸಲಾಗಿತ್ತು.

ಬಂದೂಕು ದುರಸ್ಥಿ ಪಡಿಸುತ್ತಿದ್ದ ಕೊಪ್ಪ ತಾಲೂಕು ಅಡುಗೆಬೈಲ್ ಗ್ರಾಮದ ನೇತ್ರಕೊಂಡ ಕೂಲಿ ಲೈನ್‍ನಲ್ಲಿ ವಾಸವಾಗಿದ್ದ ಸದಾಶಿವಚಾರಿ, ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ಕೆಳಗೂರು ಗ್ರಾಮದ ಸುಧಾಕರ್ ಆಚಾರ್, ಬಾಳೆಹೊನ್ನೂರು ಪಟ್ಟಣದ ರಂಭಾಪುರಿ ಮಠ ರಸ್ತೆ ನಿವಾಸಿ ರಾಮಚಂದ್ರಚಾರಿ ಅವರನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications