ಮದ್ಯ ಸಿಗದೇ ಮೂಡಿಗೆರೆಯಲ್ಲಿ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಚಿಕ್ಕಮಗಳೂರು, ಏಪ್ರಿಲ್ 03: ಲಾಕ್ ಡೌನ್ ನಡುವೆ ಎಲ್ಲಾ ವ್ಯಾಪಾರ, ಮಳಿಗೆಗಳನ್ನು ಮುಚ್ಚಲಾಗಿದೆ. ಆದರೆ ಈ ಸಮಯದಲ್ಲಿ ಕುಡಿಯಲು ಮದ್ಯ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳೂ ನಡೆಯುತ್ತಿವೆ. ಉಡುಪಿ, ಹುಬ್ಬಳ್ಳಿ, ರಾಮನಗರ, ಬೆಳಗಾವಿ, ಕಲಬುರಗಿಯಲ್ಲಿಯೂ ಮದ್ಯ ಸಿಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿದ್ದವು.
ಇದೀಗ ಚಿಕ್ಕಮಗಳೂರಿನಲ್ಲೂ ಇದೇ ಕಾರಣಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಡಿಯಲು ಮದ್ಯ ಸಿಗುತ್ತಿಲ್ಲ ಎಂದು ಮನನೊಂದು ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಮೂಡಿಗೆರೆ ನಗರದಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯೋಗೀಶ್ (40) ಎಂಬುವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

4 ದಿನಗಳ ಹಿಂದೆಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತಗೊಂಡಿದೆ. ಲಾಕ್ ಡೌನ್ ನಂತರ, ಕುಡಿಯಲು ಎಣ್ಣೆ ಸಿಗಲಿಲ್ಲ ಎಂದು ಪರಿಚಿತರ ಬಳಿ ಬೇಸರ ತೋಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications