Odisha train accident: 3 ಬಸ್‌ಗಳಲ್ಲಿ ಸುರಕ್ಷಿತವಾಗಿ ತೀರ್ಥಕ್ಷೇತ್ರ ತಲುಪಿದ ಕಾಫಿನಾಡಿನ 110 ಭಕ್ತರು
ಚಿಕ್ಕಮಗಳೂರು, ಜೂನ್, 04: ಒರಿಸ್ಸಾ ರಾಜ್ಯದ ಬಹನಾಗದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನರು ಸಿಲುಕಿಕೊಂಡಿದ್ದರು. ಆದರೆ ಇದೀಗ ಯಾತ್ರಿಗಳು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ಕೊಲ್ಕತ್ತ ನಗರದಿಂದ ಸುಮೇದ್ ಸಿಖರ್ಜಿಗೆ ತಲುಪಿ ದೇವರ ದರ್ಶನ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳಸ ತಾಲೂಕಿನ ಸಂಸೆ, ಹೊರನಾಡು, ಕುದುರೆಮುಖ ಸೇರಿದಂತೆ ಇತರೆ ಗ್ರಾಮಗಳ ಜೈನ ಸಮುದಾಯದ 110 ಜನ ಸದ್ಯ ಸುಮೇದ್ ಸಿಖರ್ಜಿ ಯಾತ್ರಾ ಸ್ಥಳ ತಲುಪಿದ್ದು, 24ನೇ ಜೈನ ತೀರ್ಥಂಕರು ಮೋಕ್ಷ ಹೊಂದಿದ್ದ ಪುಣ್ಯ ಕ್ಷೇತ್ರದ ದರ್ಶನ ಪಡೆದಿದ್ದಾರೆ. ಇವಲ್ಲರೂ ಕೊಲ್ಕತ್ತಾದಿಂದ ಮೂರು ಬಸ್‌ಗಳಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ಯಾತ್ರಾ ಸ್ಥಳ ತಲುಪಿದ್ದು, ಇದೀಗ ದೇವರ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಗುಂಡ್ಲುಪೇಟೆಯ ಯುವಕರು ಸೇಫ್
ಅದೇ ರೀತಿ ಒಡಿಶಾ ರೈಲು ದುರಂತದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಇಬ್ಬರು ಯುವಕರು ಸಿಲುಕಿಕೊಂಡಿದ್ದು, ಅವರು ಇದೀಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಮಾಹಿತಿ ತಿಳಿದುಬಂದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಎಂಬ ಯುವಕರು ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಸದ್ಯ ಅವರಿಗೆ ಯಾವುದೇ ಹಾನಿ ಆಗಿಲ್ಲ ಎಂದು ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಈ ಯುವಕರು ತವರಿಗೆ ಮರಳಲು ರೈಲು ಇಲ್ಲದೇ ಪ್ರಯಾಸ ಪಡುತ್ತಿದ್ದಾರೆ ಎನ್ನಲಾಗಿದೆ.
ಕರ್ನಾಟಕದ ಜನರನ್ನು ಕರೆತರಲು ಹೋಗಿರುವ ಸಚಿವ ಸಂತೋಷ್ ಲಾಡ್ ಅವರೊಟ್ಟಿಗೆ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಯುವಕರಿಗೆ ನೆರವು ಕೊಡಿಸಿ, ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ರವಾನಿಸಿ ಪರ್ಯಾಯ ಮಾರ್ಗದಲ್ಲಿ ರಾಜ್ಯಕ್ಕೆ ಹಿಂತಿರುಗುವಂತೆ ಸಲಹೆ ಕೊಟ್ಟಿದ್ದಾರೆ.
ಈ ಇಬ್ಬರು ಯುವಕರು ಸೇನೆಯ ಪರೀಕ್ಷೆ ಬರೆಯಲು ತೆರಳಿದ್ದರು ಎಂದು ತಿಳಿದುಬಂದಿದೆ. ಯುಕವರು ಅಪಘಾತವಾದ ರೈಲಿನಲ್ಲೇ ಇದ್ದು, ಇವರಿಗೆ ಶಾಸಕ ಗಣೇಶ್ ಪ್ರಸಾದ್ ತುರ್ತಾಗಿ ಸ್ಪಂದಿಸಿ ನೆರವಾಗಿದ್ದಾರೆ. ಅಪಘಾತ ನಡೆದ ಸ್ಥಳದಿಂದ 100 ಕಿಲೋ ಮೀಟರ್ ದೂರದಲ್ಲಿ ಈಗ ಬಂದಿದ್ದು, ಆದಷ್ಟು ಬೇಗ ಮನೆಗೆ ತಲುಪುವ ಭರವಸೆ ಇದೆ ಎಂದು ಮಹೇಶ್ ಅವರ ತಂದೆ ಮಹಾದೇವನಾಯ್ಕ ಮಾಹಿತಿ ನೀಡಿದ್ದಾರೆ.
ಇನ್ನು ಯುವಕರು ಮಾತನಾಡಿದ್ದು, ನಾವು ಸೇನೆಯ ಪರೀಕ್ಷೆ ಬರೆಯಲು ಬಂದಿದ್ದೆವು. ರೈಲುಗಳು ರದ್ದಾಗಿದ್ದು, ಬೇರೆ ಮಾರ್ಗದಲ್ಲಿ ರಾಜ್ಯವನ್ನು ತಲುಪಬೇಕಿದೆ. ಶಾಸಕ, ಸಚಿವರು ನಮಗೆ ಅಭಯ ನೀಡಿದ್ದಾರೆ. ಅಲ್ಲದೆ ದುರಂತದ ಕ್ಷಣಗಳು ಇನ್ನೂ ನಮ್ಮ ಕಣ್ಣಮುಂದೆಯೇ ಇದೆ ಎಂದು ಯುವಕ ಮಹೇಶ್ ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications