ಕಾಂಗ್ರೆಸ್‌ನಲ್ಲಿ ಅಸಮಾಧಾನ: ಮೋಟಮ್ಮ ಪುತ್ರಿಗೆ ಟಿಕೆಟ್ ಕೊಡದಂತೆ ಬಹಿರಂಗ ಸಭೆ
ಚಿಕ್ಕಮಗಳೂರು, ನವೆಂಬರ್ 2: ವಿಧಾನಸಭೆ ಚುನಾವಣೆಗೆ ಆರು ತಿಂಗಳಿರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. 2023ರ ಚುನಾವಣೆಯಲ್ಲಿ ಬಹುಮತ ಪಡೆಯಲು ಮೂರು ಪಕ್ಷಗಳು ಶತಪ್ರಯತ್ನ ಪಡುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಮೀಸಲು ಕ್ಷೇತ್ರಕ್ಕೆ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನ ಮೋಟಮ್ಮಾಗೆ ಟಿಕೆಟ್ ಬೇಡವೇ ಬೇಡ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗ ಸಭೆ ನಡೆಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಹೋಬಳಿ ವ್ಯಾಪ್ತಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಮೋಟಮ್ಮ ಪುತ್ರಿ ನಯನ ಮೋಟಮ್ಮಾಗೆ ಟಿಕೆಟ್ ನೀಡದಂತೆ ರಾಜ್ಯ ನಾಯಕರು ಹಾಗೂ ರಾಷ್ಟ್ರೀಯ ನಾಯಕರಿಗೂ ಮನವಿ ಮಾಡಲು ನಿರ್ಧರಿಸಿದ್ದಾರೆ.

ನಯನಾಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲು ಖಚಿತ. ಕ್ಷೇತ್ರದ ಜನ ನಯನ ಅವರನ್ನು ಒಪ್ಪುತ್ತಿಲ್ಲ. ಪಕ್ಷದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಕೂಡ ನಯನಾಗೆ ಟಿಕೆಟ್ ನೀಡಲು ವಿರೋಧಿಸಿದ್ದಾರೆ. ಈಗಾಗಲೇ ಮೊಟ್ಟಮ್ಮ ಐದು ಬಾರಿ ಸೋಲು ಕಂಡಿದ್ದಾರೆ. ಈ ಮಧ್ಯೆ ನಾನು ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಹೀಗಿರುವಾಗ ಅವರ ಮಗಳಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಸೋಲುವುದು ಗ್ಯಾರಂಟಿ ಎನ್ನುವುದು ಬಹುತೇಕ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಹೀಗಾಗಿ ಪಕ್ಷದಿಂದ ಸ್ಥಳೀಯರು ಹಾಗೂ ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿ ನಯನ ವಿರುದ್ಧ ಬಹಿರಂಗ ಸಭೆ ನಡೆಸಿದ್ದಾರೆ.

ಕಳೆದೊಂದು ವಾರದ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆಯಲ್ಲೂ ಸಭೆ ಸೇರಿ ಅಸಮಾಧಾನ ಹೊರಹಾಕಿದ್ದರು. ಮುಂದಿನ ವಾರದಲ್ಲಿ ಗೋಣಿಬೀಡು ಹೋಬಳಿಯಲ್ಲೂ ಸಭೆ ಸೇರುವುದಾಗಿ ತೀರ್ಮಾನಿಸಿದ್ದಾರೆ. ನಯನ ವಿರುದ್ಧ ಕಾಂಗ್ರೆಸ್ ಹೋಬಳಿಗಳಿಗೆ ಹೋಗಿ ಸಭೆ ನಡೆಸಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಹೊಸ ಮುಖಕ್ಕೆ ಮಣೆ ಹಾಕುವಂತೆ ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ.












Click it and Unblock the Notifications