Muda Scam: ಕಿಗ್ಗಾ ಋಷ್ಯಶೃಂಗೇಶ್ವರನ ಮೊರೆ ಹೋದ್ರಾ ಸಿಎಂ ಸಿದ್ದು ಸಂಬಂಧಿಗಳು...?
ಚಿಕ್ಕಮಗಳೂರು ಸೆಪ್ಟೆಂಬರ್ 17: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದ್ದು, ವಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿರುವ ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಸಂಬಂಧಿಗಳು ಶಕ್ತಿಯುತ ದೇವರಾದ ಕಿಗ್ಗಾ ಋಷ್ಯಶೃಂಗೇಶ್ವರನ ಮೊರೆ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ತೀರ್ಪಿಗೆ ದಿನಗಣನೆ ಶುರುವಾಗಿದ್ದು ಸಿದ್ದರಾಮಯ್ಯ ಅವರ ಸಂಕಷ್ಟಗಳು ದೂರವಾಗಲೆಂದು ಪೂಜೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಹೌದು... ಮುಡಾ ಹಗರಣದಲ್ಲಿ ಕೋರ್ಟ್ ತೀರ್ಪು ಬಾಕಿ ಇರುವಾಗಲೇ ಸಿದ್ದರಾಮಯ್ಯ ಸಂಬಂಧಿಗಳು ಟೆಂಪಲ್ ರನ್ ಶುರು ಮಾಡಿದ್ದಾರೆ. ತುಮಕೂರು ಮೂಲದ ಚಂದ್ರಶೇಖರ್ ಎಂಬುವರಿಂದ ಕಿಗ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಚಂದ್ರಶೇಖರ್ ತುಮಕೂರು ಮೂಲದ ಸಿಎಂ ಸಿದ್ದರಾಮಯ್ಯ ಅವರ ಸಂಬಂಧಿ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲೆಂದು ಕಿಗ್ಗಾ ಋಷ್ಯಶೃಂಗೇಶ್ವರನಿಗೆ ವಿಶೇಷ ಪೂಜೆ ಹಾಗೂ ಶತರುದ್ರಾಭಿಷೇಕ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಭಾನುವಾರ ಮಧ್ಯಾಹ್ನ ಕಿಗ್ಗಾ ಋಷ್ಯಶೃಂಗೇಶ್ವರನ ದೇವಸ್ಥಾನಕ್ಕೆ ಬಂದ ಚಂದ್ರಶೇಖರ್ ಅವರು ಸೋಮವಾರ ಶತರುದ್ರಾಭಿಷೇಕ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿ ದೇಗುಲ ಸಾಕಷ್ಟು ಪ್ರಸಿದ್ಧ ದೇವಸ್ಥಾನವಾಗಿದೆ. ಮನಸ್ಸಿನ ಆಸೆ ಈಡೇರಲು ಇಲ್ಲಿನ ದೇವತೆಗಳಿಗೆ ಶತರುದ್ರಾಭಿಷೇಕ ಮಾಡಿಸುತ್ತಾರೆ. ಕಿಗ್ಗಾದ ಋಷ್ಯಶೃಂಗೇಶ್ವರ ಮಳೆ ದೇವರು ಎಂದೇ ಖ್ಯಾತಿ ಪಡೆದಿದೆ.

ಅತಿವೃಷ್ಟಿ-ಅನಾವೃಷ್ಟಿ ವೇಳೆ ಸರ್ಕಾರದಿಂದಲೇ ಹಲವು ಬಾರಿ ಪೂಜೆಗಳನ್ನು ಇಲ್ಲಿ ಸಲ್ಲಿಸಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ನೆಚ್ಚಿನ ದೈವಗಳಲ್ಲಿ ಕಿಗ್ಗಾ ಋಷ್ಯಶೃಂಗೇಶ್ವರ ಕೂಡ ಒಂದಾಗಿದೆ. ಡಿಕೆ ಶಿವಕುಮಾರ್ ಅವರು ಈ ಹಿಂದೆ ಕಿಗ್ಗಾ ಋಷ್ಯಶೃಂಗೇಶ್ವರನಿಗೆ ಬೆಳ್ಳಿ ಮುಖವಾಡ ನೀಡಿದ್ದರು. ಸದ್ಯ ಸಿಎಂಗೆ ಬಂದಿರೋ ಸಂಕಷ್ಟ ನಿವಾರಣೆಗೆ ಸಿದ್ದರಾಮಯ್ಯ ಸಂಬಂಧಿಗಳು ಋಷ್ಯಶೃಂಗೇಶ್ವರರ ಮೊರೆ ಹೋದ್ರಾ ಎನ್ನುವ ಅನುಮಾನ ಮೂಡಿದೆ.
ಮುಡಾ ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆಗೆಗೆ ಕಳೆದ ಒಂದು ವರ್ಷದಿಂದ 15 ಪತ್ರಗಳನ್ನು ಬರೆದಿದ್ದ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು 50- 50 ಅನುಪಾತವನ್ನು ರದ್ದು ಪಡಿಸಿ ಸೂಕ್ತ ಕ್ರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಜೊತೆಗೆ ತನಿಖಾ ಸಮಿತಿ ರಚಿಸಿ ಮುಡಾ ಆಯಕ್ತರ ವಿಚಾರಣೆ ಮಾಡುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಮೈಸೂರಿನ ಮೂಡಾ ಹಗರಣ ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು ವಿಪಕ್ಷಗಳ ಬಾಯಿಗೂ ಎಲೆ ಅಡಿಕೆಯಾಗಿಬಿಟ್ಟಿದೆ. ಸೈಟ್ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಸಹ ಕೇಳಿ ಬಂದಿದ್ದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸುವಂತೆ ವಿಪಕ್ಷಗಳು ಒತ್ತಾಯಿಸಿವೆ.












Click it and Unblock the Notifications