ಚಂದ್ರಶೇಖರ್ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರು!
ಚಿಕ್ಕಮಗಳೂರು ನವೆಂಬರ್4 : ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಗುರುವಾರ ತುಂಗಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಗನ ಅಗಲಿಕೆಯಿಂದ ರೇಣುಕಾಚಾರ್ಯ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಅಕ್ಟೋಬರ್ 31 ಭಾನುವಾರ ಚಂದ್ರಶೇಖರ್ ಮನೆಗೆ ಬಾರದ ಕಾರಣ ಸೋಮವಾರ ಕುಟುಂಬಸ್ಥರು ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೋಮವಾರ ಮಧ್ಯರಾತ್ರಿ ಒಂದು ಗಂಟೆಗೆ ಚಂದ್ರಶೇಖರ್ ಕಾರು ಶಿವಮೊಗ್ಗದ ಹತ್ತಿರದ ಸುರಹೊನ್ನೆಯಲ್ಲಿರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆ ಮೂಲಕ ಹಾದು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಯಾಗಿತ್ತು.
ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ರಾತ್ರಿ ಒಂಬತ್ತು ಗಂಟೆಗೆ ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಹಾಗೂ ಆತನ ಸ್ನೇಹಿತ ಕಿರಣ್ 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು.

ಬಳಿಕ ವಿನಯ್ ಗುರೂಜಿ ಆರ್ಶೀವಾದ ಪಡೆದು, 30-10-2022ರ ಭಾನುವಾರ ರಾತ್ರಿ 9.45ಕ್ಕೆ ಆಶ್ರಮದಿಂದ ತೆರಳಿದ್ದರು. ಮಧ್ಯರಾತ್ರಿ ಒಂದು ಗಂಟೆಗೆ ಚಂದ್ರಶೇಖರ್ ಕಾರು ಶಿವಮೊಗ್ಗದ ಹತ್ತಿರದ ಸುರಹೊನ್ನೆಯಲ್ಲಿರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆ ಮೂಲಕ ಹಾದು ಹೋಗಿತ್ತು. ಆಶ್ರಮದಿಂದ ತೆರಳುವ ಮುನ್ನ ವಿನಯ್ ಗುರೂಜಿ ಆರ್ಶೀವಾದ ಮಾಡುವಾಗ ಜಾಗ್ರತೆ ಎಂದು ಕಿವಿಮಾತು ಹೇಳಿದ್ದರು.
ಆ ಬಳಿಕ ಚಂದ್ರಶೇಖರ್ ಯಾರ ಸಂಪರ್ಕಕಕ್ಕೆ ಸಿಗದೇ ನಾಪತ್ತೆಯಾಗಿದ್ದರು. ಶಾಸಕ ರೇಣುಕಾಚಾರ್ಯ ಅವರ ಮನೆ ಮಗನ ಕಣ್ಮರೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಈ ಕಾರಣದಿಂದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್, ಚಂದ್ರಶೇಖರ್ ಪತ್ತೆಗಾಗಿ 4 ವಿಶೇಷ ತಂಡಗಳನ್ನು ರಚಿಸಿದ್ದರು. ಆದರೆ ದುರಾದೃಷ್ಟವಶಾತ್ ಗುರುವಾರ ಮಧ್ಯಾಹ್ನ ಹೊನ್ನಾಳಿ-ನ್ಯಾಮತಿ ನಡುವೆ ಬರುವ ತುಂಗಾ ಮೇಲ್ದಂಡೆ ನಾಲೆಯಲ್ಲಿ ಸಿಕ್ಕ ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿತ್ತು.

ಇನ್ನು ಚಂದ್ರಶೇಖರ್ ಗೌರಿ ಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಆಗಾಗ ತೆರಳುತ್ತಿದ್ದು, ವಿನಯ್ ಗುರೂಜಿಯೊಂದಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಚಂದ್ರಶೇಖರ್ ಸಾವಿನ ಬಗ್ಗೆ ವಿನಯ್ ಗುರೂಜಿ ಆಶ್ರಮದ ಸಿಬ್ಬಂದಿ ಮಾತನಾಡಿದ್ದಾರೆ. "ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿಐಪಿಗಳು ಎಂದು ಪರಿಗಣಿಸಲ್ಲ. ಹಾಗೆಯೇ ಚಂದ್ರು ಕೂಡ ಕಿರಣ್ ಜೊತೆ ಬರುತ್ತಿದ್ದರು, ಬಂದಿದ್ದರು. ಆಶ್ರಮದಲ್ಲಿ ಚಂದ್ರು ಊಟ ಬಡಿಸುತ್ತಿದ್ದ, ತೆಂಗಿನಕಾಯಿ ಸುಲಿಯುತ್ತಿದ್ದ. ಅವರ ಸರಳತೆ ಎಲ್ಲರಿಗೂ ಇಷ್ಟ. ಚಂದ್ರು ಸಾವು ನಮಗೆ ತುಂಬಾ ನೋವು ತಂದಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ" ಎಂದರು.












Click it and Unblock the Notifications