ಚಿಕ್ಕಮಗಳೂರಿನಲ್ಲಿ ಅಪರೂಪದ ಘಟನೆ: ಒಂದೇ ಗ್ರಾಮ ಪಂಚಾಯತಿಯ ಅಧ್ಯಕ್ಷೆ-ಉಪಾಧ್ಯಕ್ಷೆಯಾದ ತಾಯಿ-ಮಗಳು
ಚಿಕ್ಕಮಗಳೂರು, ಆಗಸ್ಟ್ 09: ದಿಲ್ಲಿ ರಾಜಕೀಯಕ್ಕಿಂತ ಹಳ್ಳಿ ರಾಜಕೀಯ ಕಷ್ಟ. ಪಕ್ಷದ ಬ್ಯಾನರ್ ಅಡಿ ಎಂ.ಪಿ-ಎಂಎಲ್ಎ ಬೇಕಾದರೂ ಆಗಬಹುದು. ಆದರೆ ಹಳ್ಳಿ ರಾಜಕೀಯದಲ್ಲಿ ಸದಸ್ಯ ಆಗುವುದು ಕಷ್ಟ. ಅದರಲ್ಲೂ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರಾಗೋದು ಇನ್ನೂ ಕಷ್ಟ. ಹೀಗಿರುವಾಗ ಅಮ್ಮ-ಮಗಳು ಒಂದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ-ಉಪಾಧ್ಯಕ್ಷೆಯಾದರೆ ಹೇಗಿರುತ್ತದೆ. ಅಂತಹಾ ಒಂದು ಅಪರೂಪದ ಸನ್ನಿವೇಶಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗರ್ಜೆ ಗ್ರಾಮದ 20 ವರ್ಷದ ಸ್ನೇಹ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿದ್ದು, ಆಕೆ ತಾಯಿ ನೇತ್ರಾವತಿ ಉಪಾಧ್ಯಕ್ಷೆಯಾಗಿದ್ದಾರೆ. ಗರ್ಜೆ-ಜಿ.ಮಾದಾಪುರ ಎರಡು ಗ್ರಾಮ ಸೇರಿ ಒಂದು ಪಂಚಾಯಿತಿಯಾಗಿದ್ದು, ಒಟ್ಟು ಏಳು ಜನ ಸದಸ್ಯರಿದ್ದಾರೆ.

ಕಳೆದ ಅವಧಿಗೆ ಬೇರೆಯವರು ಅಧ್ಯಕ್ಷರು-ಉಪಾಧ್ಯಕ್ಷರಾಗಿದ್ದರು. ಈ ಬಾರಿ ಅಧ್ಯಕ್ಷೆ ಸ್ಥಾನ ಜನರಲ್ ಮಹಿಳೆಗೆ ಬಂದಿತ್ತು. ಉಪಾಧ್ಯಕ್ಷೆ ಸ್ಥಾನ ಬಿಸಿಎಂ ಲೇಡಿಗೆ ಬಂದಿತ್ತು. ಏಳು ಜನ ಸದಸ್ಯರಲ್ಲಿ ಕೆಲ ವಿರೋಧ ಇದ್ದೇ ಇರುತ್ತದೆ. ಇಲ್ಲೂ ಇತ್ತು. ಏಳರಲ್ಲಿ 3 ಜನರ ಗುಂಪು ಒಂದು. 4 ಜನರ ಗುಂಪು ಮತ್ತೊಂದು. ಆ ವಿರೋಧದ ಮಧ್ಯೆಯೂ ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿರುವುದರಿಂದ ತಾಯಿ-ಮಗಳು ಇಬ್ಬರು ಖುಷಿಯಾಗಿದ್ದಾರೆ.
ನಾವು ಗೆಲ್ಲುತ್ತೇವೆ ಎನ್ನುವುದು ಕನಸಾಗಿತ್ತು. ಅದೃಷ್ಠದಿಂದ ಗೆದ್ದಿದ್ದೇವೆ. ಆದರೆ ಅಧ್ಯಕ್ಷರು-ಉಪಾಧ್ಯಕ್ಷರು ಆಗುತ್ತೇವೆ ಎಂದು ಕನಸಲ್ಲೂ ಕಂಡಿರಲಿಲ್ಲ. ಈಗ ಆಗಿದ್ದೇವೆ. ಜನ ನಂಬಿಕೆ ಉಳಿಸಿಕೊಂಡು ಒಳ್ಳೆ ಕೆಲಸ ಮಾಡಬೇಕು ಎಂದು ಉಪಾಧ್ಯಕ್ಷೆ ನೇತ್ರಾವತಿ ಹೇಳಿದ್ದಾರೆ. 5 ವರ್ಷದ ಅಮ್ಮ ನೇತ್ರಾವತಿ ಉಪಾಧ್ಯಕ್ಷೆಯಾಗಿದ್ದು ದೊಡ್ಡ ವಿಚಾರವಿಲ್ಲ. ಆದರೆ 20 ವರ್ಷದ ಮಗಳು ಅಧ್ಯಕ್ಷೆ ಆಗಿರುವುದೇ ವಿಶೇಷವಾಗಿದೆ.
ಜಿ.ಮಾದಾಪುರ ಹಾಗೂ ಗರ್ಜೆ ಎರಡೂ ಗ್ರಾಮದಲ್ಲೂ ನೇತ್ರಾವತಿ ಅವರನ್ನು ನಿಲ್ಲಿಸಲು ಬಂಬೆಲಿಗರು ತೀರ್ಮಾನಿಸಿದ್ದರು. ಎರಡೂ ಕಡೆ ಗೆದ್ದರೆ ಮತ್ತೆ ಉಪಚುನಾವಣೆ ನಡೆಯುತ್ತದೆ ಎಂದು ನಾಮಪತ್ರ ಸಲ್ಲಿಕೆಯ ಕಡೇ ದಿನದ ಕೊನೆ ಐದು ನಿಮಿಷದಲ್ಲಿ ಆಮೇಲೆ ನೋಡೋಣ ಎಂದು ಸ್ನೇಹ ತಂದೆ ಸ್ನೇಹಿತರು ಸ್ನೇಹಾಳ ಹೆಸರು ಸೇರಿಸಿ ನಾಮಪತ್ರ ಸಲ್ಲಿಸಿದ್ದರು. ಅಮ್ಮ-ಮಗಳು ಇಬ್ಬರೂ ಚುನಾವಣೆಯಲ್ಲಿ ಗೆದ್ದರು. ಗೆದ್ದಿದ್ದೇ ಪುಣ್ಯ ಎಂದುಕೊಂಡಿದ್ದ ಅಮ್ಮ-ಮಗಳು ಇಂದು ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿರೋದನ್ನು ನೆನೆದು ಇಬ್ಬರೂ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದು, ಊರಿನ ಜನ ಹಾಗೂ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಒಳ್ಳೆ ಕೆಲಸ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಒಟ್ಟಾರೆ, ಕಾಫಿನಾಡ ಚಿಕ್ಕಮಗಳೂರು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ, ಒಂದೇ ಮನೆಯಲ್ಲಿ ಶಾಸಕರಾಗಿದ್ದಾರೆ. ಸಚಿವರಾಗಿದ್ದಾರೆ. ಮಂತ್ರಿಗಳಾಗಿದ್ದಾರೆ. ಆದರೆ ಹಳ್ಳಿಯ ಜಾತಿ ರಾಜಕೀಯದಲ್ಲಿ ಸದಸ್ಯರಾಗೋದೆ ಕಷ್ಟಸಾಧ್ಯ. ಹೀಗಿರುವಾಗ ಆಧುನಿಕ ರಾಜಕೀಯ ಕುರುಕ್ಷೇತ್ರದಲ್ಲಿ ಒಂದೇ ಮನೆಯ ತಾಯಿ-ಮಗಳು ಇಬ್ಬರು ಅಧ್ಯಕ್ಷರು-ಉಪಾಧ್ಯಕ್ಷರಾಗಿರೋದು ನಿಜಕ್ಕೂ ಸಾಧನೆಯೇ ಸರಿ. ಆದರೆ, ಅವರು ಗ್ರಾಮಸ್ಥರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ.












Click it and Unblock the Notifications