ಅಕ್ರಮ ಆಸ್ತಿ ಗಳಿಕೆ ಆರೋಪ: ಶಾಸಕ ಟಿ.ಡಿ.ರಾಜೇಗೌಡ ಪ್ರತಿಕ್ರಿಯೆ
ಚಿಕ್ಕಮಗಳೂರು, ನ. 28: ಶೃಂಗೇರಿಯಲ್ಲಿ ನಡೆದದ್ದು ಬಿಜೆಪಿಯ ಜನಸಂಕಲ್ಪ ಯಾತ್ರೆ ಅಲ್ಲ. ಅದು ನನ್ನನ್ನು ಟಾರ್ಗೆಟ್ ಮಾಡಿದ್ದ ಸಮಾವೇಶ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಬಿಜೆಪಿ ಸಮಾವೇಶದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, "ಜನಸಂಕಲ್ಪ ಸಮಾವೇಶದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅದು ನನ್ನ ಟಾರ್ಗೆಟ್ ಮಾಡಿದ್ದ ಸಮಾವೇಶವಾಗಿತ್ತು. ಜೀವರಾಜ್ ಅವರ ಕುಮ್ಮಕ್ಕಿನಿಂದ ಹೀಗೆ ಮಾತನಾಡಿರಬಹುದು ಎಂದು ಭಾವಿಸಿದ್ದೇನೆ" ಎಂದರು.
ಚಿಕ್ಕಮಗಳೂರು, ಚಿತ್ರದುರ್ಗ ಸುದ್ದಿ; ಕ್ಯಾಬ್ ಚಾಲಕನಿಗೆ ಥಳಿತ, ಅಪಘಾತ
ಮುಂದುವರಿದು, "ಮುಖ್ಯಮಂತ್ರಿ ಬಸವರಾಜ ಸಿಎಂ ಬೊಮ್ಮಾಯಿಯವರು ಜವಾಬ್ದಾರಿಯಿಂದ ಮಾತನಾಡುತ್ತಾರೆ. ನಾನು ಬಹಳ ಸಲ ನೋಡಿದ್ದೇನೆ. ಆದರೆ, ಶೋಭಾ ಕರಂದ್ಲಾಜೆಯವರು ಹಾಗೂ ಉಳಿದವರು ಅವ್ಯವಹಾರ ಆಗೇ ಹೋಗಿದೆ, ಮುಗಿದೆ ಹೋಗಿದೆ ಎಂಬಂರ್ಥದಲ್ಲಿ ಮಾತನಾಡಿದ್ದಾರೆ" ಎಂದು ಅಸಮಾಧಾನ ಹೊರಹಾಕಿದರು.
"ನಾನು ರಾಜಕಾರಣಕ್ಕೆ ಬರುವ ಮುನ್ನ ನನ್ನ ಆಸ್ತಿ ಎಷ್ಟಿದೆ, ಜೀವರಾಜ್ ರಾಜಕೀಯಕ್ಕೆ ಬರುವ ಮುನ್ನ ಎಷ್ಟಿತ್ತು, ಈಗ ಎಷ್ಟಿದೆ ಎಲ್ಲವೂ ತನಿಖೆಯಾಗಲಿ. ನಾನು ರಾಜಕಾರಣಕ್ಕೆ ಬಂದ ಮೇಲೆ ಒಂದು ರೂಪಾಯಿ, ಒಂದಿಂಚು ಆಸ್ತಿ ಜಾಸ್ತಿಯಾಗಿದ್ದರೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಜೀವರಾಜ್ ಪಡೆಯುತ್ತಾರಾ..?" ಎಂದು ಸವಾಲು ಹಾಕಿದ್ದಾರೆ. ಜೊತೆಗೆ ಇನ್ನೊಬ್ಬರ ಮೇಲೆ ಆರೋಪ ಮಾಡುವಾಗ ಸ್ವಲ್ಪವಾದರೂ ಹುರುಳಿರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಾನುವಾರ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ನಡೆಸಿದೆ. ಈ ವೇಳೆ ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಯ ಪರಿಹಾರ ಮತ್ತು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು.