ಬಾಡೂಟ ಮಿಸ್ ಆಗುವ ಭಯದಲ್ಲಿ ಪೊಲೀಸರನ್ನೇ ಪೇಚಿಗೆ ಸಿಲುಕಿಸಿದ ಭೂಪ!
ಚಿಕ್ಕಮಗಳೂರು ಸೆಪ್ಟೆಂಬರ್ 27: ಬಾಡೂಟ ಮಿಸ್ ಆಗುವ ಭಯದಲ್ಲಿ ಭೂಪನೊಬ್ಬ ಪೊಲೀಸರನ್ನೇ ಪೇಚಿಗೆ ಸಿಲುಕಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಹಿರಿಯರ ಹಬ್ಬದ ಬಾಡೂಟ ತಿನ್ನುವ ಆಸೆಗೆ ಭೂಪನೊಬ್ಬ 112 ಪೊಲೀಸರಿಗೆ ಸುಳ್ಳು ಕರೆ ಮಾಡಿದ್ದಾನೆ. ವ್ಯಕ್ತಿಯ ವಿಚಿತ್ರ ಮಾತಿಗೆ ಪೊಲೀಸರೇ ಕೆಲಕಾಲ ಕಕ್ಕಾ ಬಿಕ್ಕಿಯಾಗಿದ್ದಾರೆ.
ಹೌದು... ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಈ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಅಶೋಕ್ ಎಂಬುವವರಿಂದ ಪೊಲೀಸರಿಗೆ ಕಳೆದ ದಿನ ರಾತ್ರಿ ಕರೆ ಬಂದಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಿಂದ ಅಶೋಕ್ ಎಂಬಾತ ಪೊಲೀಸರಿಗೆ ಕರೆ ಮಾಡಿದ್ದನು.

112ಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತನಾಡಿದ ಅಶೋಕ್ 'ಸರ್ ಇಲ್ಲಿ ಜಗಳ ಆಗ್ತಿದೆ ಬೇಗ ಬನ್ನಿ' ಎಂದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರಿಗೆ ವ್ಯಕ್ತಿ ಹೇಳಿದ್ದು ಸುಳ್ಳು ಎಂದು ಅರಿವಾಗಿದೆ. ಬಳಿಕ ಕರೆ ಮಾಡಿ ಸುಳ್ಳು ಮಾಹಿತಿ ನೀಡಿದ ಆರೋಪಿಯನ್ನು ಹಿಡಿದು ವಿಚಾರಿಸಿದ ಪೊಲೀಸರು ಆತನ ಮಾತು ಕೇಳಿ ಶಾಕ್ ಆಗಿದ್ದಾರೆ.
ಪೊಲೀಸರು ವಿಚಾರಿಸಿದಾಗ ಆರೋಪಿ ಅಶೋಕ್, 'ಪಲ್ಗುಣಿ ಗ್ರಾಮದ ನೆಂಟರ ಮನೆಯಲ್ಲಿ ಹಿರಿಯರ ಹಬ್ಬದ ಊಟ ಇದೆ ಸಾರ್..! ಬಾಡೂಟ ತಿನ್ನಲು ನೆಂಟರ ಮನೆಗೆ ಬಿಟ್ಟು ಬನ್ನಿ ಸಾರ್' ಎಂದು ಪೊಲೀಸರ ಬಳಿಯೇ ಸಹಾಯ ಕೇಳಿದ್ದಾನೆ. ವ್ಯಕ್ತಿಯ ವಿಚಿತ್ರ ಮಾತಿಗೆ ಪೊಲೀಸರೇ ಕೆಲಕಾಲ ಕಕ್ಕಾ ಬಿಕ್ಕಿಯಾಗಿದ್ದಾರೆ. ಬಳಿಕ ಆತನಿಗೆ ಬುದ್ಧಿವಾದ ಹೇಳಿ ಲಾರಿ ಹತ್ತಿಸಿ ಕಳುಹಿಸಿದ್ದಾರೆ.
ಚಿಕ್ಕಮಗಳೂರು: ಭದ್ರಾ ರಿಸರ್ವ್ ಫಾರೆಸ್ಟ್ ನಲ್ಲಿ ಆನೆ ಹಂತಕರ ತಂಡ ಸಕ್ರೀಯ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭದ್ರಾ ಮೀಸಲು ಅರಣ್ಯದ ಅಲ್ದಾರ ಬಳಿ ಆನೆ ಕಳೆಬರಹ ಪತ್ತೆಯಾಗಿದೆ. ಹೀಗಾಗಿ ಭದ್ರಾ ರಿಸರ್ವ್ ಫಾರೆಸ್ಟ್ ನಲ್ಲಿ ಆನೆ ಹಂತಕರ ತಂಡ ಸಕ್ರೀಯಗೊಂಡಿರುವ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಕಾಡುಗಳ್ಳ ದಂತಚೋರರು ದಂತಕ್ಕಾಗಿ ಆನೆಗಳಿಗೆ ಗುಂಡಿಡುವ ಶಂಕೆ ಕೂಡ ಉದ್ಭವಿಸಿದೆ.
ಆನೆಯ ಹಣೆ ಮೇಲೆ 2 ಇಂಚಿನಷ್ಟು ಅಗಲದ ಗುಂಡಿನ ಗುರುತು ಪತ್ತೆಯಾಗಿದೆ. ಆನೆ ತಿಂಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ಇದ್ದು, ದಿನದಿಂದ ದಿನಕ್ಕೆ ಗುಂಡಿಟ್ಟು ಸಾವನ್ನಪ್ಪಿರುವ ಆನೆಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಲ್ದಾರ ವಿಭಾಗದ ಭೈರಾಪುರ ವ್ಯಾಪ್ತಿಯಲ್ಲಿ ಯತೇಚ್ಛವಾಗಿರೋ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿವೆ.
ಸ್ಥಳಿಯ ಮೀನುಗಾರರಿಂದ ಆನೆ ಕಳೆಬರಹದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕಿದ್ದು, ಆನೆ ಸತ್ತ ಜಾಗದಲ್ಲಿ ಆನೆ ದಂತಗಳು ಪತ್ತೆಯಾಗಿಲ್ಲ. ದಂತಕ್ಕಾಗಿ ಆನೆಗೆ ಗುಂಡಿಟ್ಡು ಕೊಂದಿರುವ ಶಂಕೆ ಇದೆ. ಆನೆ ಸತ್ತು ತಿಂಗಳಾದರೂ ವಿಷಯ ಅರಣ್ಯ ಇಲಾಖೆ ಗಮನಕ್ಕೆ ಬಂದಿಲ್ಲ ಯಾಕೆ ಎನ್ನುವ ಪ್ರಶ್ನೆ ಕೂಡ ಸದ್ಯ ಮೂಡಿದೆ.
ಆನೆ ಕಳೆಬರಹವನ್ನ ಅಧಿಕಾರಿಗಳು ಸರಿಯಾಗಿ ತಪಾಸಣೆ ಮಾಡಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿವೆ. ಪರಿಸರವಾದಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆಯೇ ಅನುಮಾನ ವ್ಯಕ್ತವಾಗಿದೆ.












Click it and Unblock the Notifications