ಚಂದ್ರಗ್ರಹಣ 2022: ಹೊರನಾಡಿನ ದೇವಸ್ಥಾನದಲ್ಲಿ ಪೂಜೆ ವ್ಯವಸ್ಥೆ ಹೇಗಿದೆ?
ಚಿಕ್ಕಮಗಳೂರು, ನವೆಂಬರ್, 08: ಮಂಗಳವಾರ (ನವೆಂಬರ್ 08) ಚಂದ್ರಗ್ರಹಣ ಹಿನ್ನೆಲೆ ನಾಡಿನ ಸುಪ್ರಸಿದ್ಧ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ 11ರಿಂದ 12 ಗಂಟೆವರೆಗೆ ಮಾತ್ರ ಪ್ರಸಾದದ ವ್ಯವಸ್ಥೆ ಇರಲಿದೆ. ಅದಾದ ಬಳಿಕ ಗ್ರಹಣ ಮುಗಿಯುವವರೆಗೂ ಮತ್ತೆ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಮಧ್ಯಾಹ್ನ 1:30ಕ್ಕೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 4ಕ್ಕೆ ಅರ್ಚನೆ ಇರಲಿದೆ. ಆದರೆ ಗ್ರಹಣ ಮೋಕ್ಷ ಕಾಲದ ಬಳಿಕ ಶುದ್ದಿ ಕಾರ್ಯದ ನಂತರವೇ ಪೂಜೆ-ಪ್ರಸಾದದ ವ್ಯವಸ್ಥೆ ಇರುತ್ತದೆ. ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ ಮಾಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇನ್ನು ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಎಂದಿನಂತೆ ಪೂಜೆ ಇರುತ್ತದೆ. ಆದರೆ ಮಧ್ಯಾಹ್ನದ ಊಟ ಇರುವುದಿಲ್ಲ. ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪೂಜೆ-ಪ್ರಸಾದ ಸೇರಿದಂತೆ ಯಾವುದೇ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಇರಲಿದೆ. ಗ್ರಹಣದ ಬಳಿಕ ಪೂಜೆ-ಪ್ರಸಾದ ಎಂದಿನಂತೆ ಇರಲಿದೆ.
ಗ್ರಹಣ ಸ್ಪರ್ಶ ಕಾಲ : ಸಂಜೆ 5:8
ಗ್ರಹಣ ಮಧ್ಯ ಕಾಲ : ಸಂಜೆ 5:50
ಗ್ರಹಣದ ಮೋಕ್ಷ ಕಾಲ : ಸಂಜೆ 6:29

ದ.ಕನ್ನಡದ ದೇವಸ್ಥಾನಗಳಿಂದ ಪ್ರಕಟಣೆ
ಮಂಗಳವಾರ (ನವೆಂಬರ್ 8) ಚಂದ್ರಗ್ರಹಣ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜಾ, ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ಈ ಬಗ್ಗೆ ಪ್ರಕಟಣೆ ಹೊರಡಿಸಿವೆ. ಚಂದ್ರ ಗ್ರಹಣ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 8ರಂದು ಯಾವುದೇ ಕಾರ್ಯಕ್ರಮ ನೆರವೇರುವುದಿಲ್ಲ. ಅಲ್ಲದೇ ಭೋಜನ ಪ್ರಸಾದ ವಿತರಣೆ ಕೂಡ ಇರುವುದಿಲ್ಲ. ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತರಿಗೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9 ರಿಂದ 11:30ರವರೆಗೆ ಭಕ್ತರಿಗೆ ದೇವರ ದರ್ಶನ ಅವಕಾಶವನ್ನು ಕಲ್ಪಿಸಲಾಗಿದೆ. ಗ್ರಹಣ ಸ್ಪರ್ಶ ಸಮಯವಾದ 2:39ರಿಂದ ಗ್ರಹಣ ಮೋಕ್ಷ ಸಮಯ 6:19ರತನಕ ಮತ್ತು ರಾತ್ರಿ 7:30 ರಿಂದ 9 ರತನಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೋಜನ ವ್ಯವಸ್ಥೆಗೆ ನಿಗದಿಯಾದ ಸಮಯ
ಚಂದ್ರಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲೂ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಲಿದೆ. ಮಧ್ಯಾಹ್ನ 1:30ರಿಂದ ರಾತ್ರಿ 7ರತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 1:30ರ ವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7 ಗಂಟೆಯ ನಂತರ ಭೋಜನ ವ್ಯವಸ್ಥೆ ಮುಂದುವರಿಯಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ. ಇನ್ನು ಕಟೀಲು ದೇವಸ್ಥಾನದಲ್ಲೂ ಗ್ರಹಣದ ದಿನ ದೇವರ ಪೂಜೆಯ ಸಮಯ ಬದಲಾವಣೆ ಆಗಲಿದೆ. ನವೆಂಬರ್ 8ರಂದು ಬೆಳಗ್ಗೆ 9:30ಕ್ಕೆ ದೇವರಿಗೆ ಪೂಜೆ ನಡೆಯುತ್ತದೆ. ಮಧ್ಯಾಹ್ನ ಭೋಜನ ಇರುವುದಿಲ್ಲ.

ರಾತ್ರಿ 8 ಗಂಟೆಗೆ ಜರುಗಲಿರುವ ಪೂಜೆಗಳು
ಬೆಳಗ್ಗೆ 11:30 ರ ತನಕ ಮಾತ್ರ ಫಲಾಹಾರ ಇರುತ್ತದೆ. ರಾತ್ರಿ 8 ಗಂಟೆಗೆ ಪೂಜೆಗಳು ನಡೆಯಲಿದ್ದು, ಭೋಜನವೂ ಇರುತ್ತದೆ. ಗ್ರಹಣ ಕಾಲದಲ್ಲಿ ದೇಗುವ ತೆರೆದಿರುತ್ತದೆ. ಗ್ರಹಣ ಮಧ್ಯ ಕಾಲದವರೆಗೆ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಮಧ್ಯಕಾಲ ಸಂಜೆ 4:29ಕ್ಕೆ ಗ್ರಹಣದ ವಿಶೇಷ ಪೂಜೆ ಇದೆ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.

ಗ್ರಹಣ ಸ್ಪರ್ಶ, ಮೋಕ್ಷ ಬಗ್ಗೆ ವಿವರ
ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನವೆಂಬರ್ 8, 2022 ರಂದು ಕಾಣಿಸಿಕೊಳ್ಳಲಿದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಪೂಜಾ, ದರ್ಶನ ಸಮಯ ಹಾಗೂ ಭೋಜನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದೆ. ಚಂದ್ರಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಲಿದೆ. ಮಧ್ಯಾಹ್ನ 1:30ರಿಂದ ರಾತ್ರಿ 7ರತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 1:30ರ ವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7 ಗಂಟೆಯ ನಂತರ ಭೋಜನ ವ್ಯವಸ್ಥೆ ಮುಂದುವರಿಯಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.












Click it and Unblock the Notifications