ತೆನೆ..ಕೈ..ಮತ್ತೆ ತೆನೆ...ಹೀಗೆ ಸುತ್ತಿ ಸುತ್ತಿ ಬರಿಗೈಯಲ್ಲಿ ಮನೆ ಸೇರಿದ ವೈಎಸ್‌ವಿ ದತ್ತಾ !
ಚಿಕ್ಕಮಗಳೂರು, ಮೇ. 13: 'ನನ್ನ ಪ್ರತಿಜ್ಞೆ - ನನ್ನ ಶಪಥ' ಎಂದು ಬಾಂಡ್ ಪೇಪರ್ ಮೇಲೆ ಶಪಥ ಮಾಡಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ, ಕಾಂಗ್ರೆಸ್ ಟಿಕೆಟ್ ಸಿಗದೆ ಮತ್ತೆ ತವರು ಮನೆಗೆ ಸೇರಿದ್ದ ವೈಎಸ್‌ವಿ ದತ್ತಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಎಸ್ ಆನಂದ್ ಭರ್ಜರಿ ಜಯಗಳಿಸಿದ್ದಾರೆ. ಕಳೆದ ಬಾರಿ ದತ್ತಾ ವಿರುದ್ಧ 16 ಸಾವಿರ ಮತಗಳಿಂದ ಗೆದ್ದಿದ್ದ ಬೆಳ್ಳಿ ಪ್ರಕಾಶ್ ಅಲಿಯಾಸ್ ಕೆಎಸ್ ಪ್ರಕಾಶ್ಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿತ್ತು. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕೆಎಸ್ ಆನಂದ್ ಈ ಬಾರಿ ಜಯಗಳಿಸಿದ್ದಾರೆ. ವೈಎಸ್‌ವಿ ದತ್ತಾ ಮೂರನೇ ಸ್ಥಾನ ಪಡೆದಿದ್ದಾರೆ.

ಒಟ್ಟು ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಸ್ ಆನಂದ್ 74,336 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ 62,030 ಮತಗಳನ್ನು ಪಡೆದಿದ್ದಾರೆ ಇನ್ನು ವೈಎಸ್‌ವಿ ದತ್ತಾ ಕೇವಲ 26368 ಮತಗಳಿಗೆ ತೃಪ್ತಿ ಪಡೆದಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್‌ವಿ ದತ್ತಾ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಮತ್ತೆ ಜೆಡಿಎಸ್ ಸೇರ್ಪಡೆಯಾಗಿ ಕಣದಲ್ಲಿದ್ದರು.

ಕಡೂರು ಕ್ಷೇತ್ರದಲ್ಲಿ 2008, 2013 ಹಾಗೂ 2018ರಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ, ವೈಎಸ್‌ವಿ ದತ್ತಾ, 2013ರಲ್ಲಿ ಮಾತ್ರ ಸುಮಾರು 42 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಬೆಳ್ಳಿ ಪ್ರಕಾಶ್ ಅಲಿಯಾಸ್ ಕೆಎಸ್ ಪ್ರಕಾಶ್ ದತ್ತಾ ವಿರುದ್ಧ 16 ಸಾವಿರ ಮತಗಳಿಂದ ಗೆದ್ದಿದ್ದರು.












Click it and Unblock the Notifications