Karnataka election 2023: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಂ.ಪಿ.ಕುಮಾರಸ್ವಾಮಿ
ಚಿಕ್ಕಮಗಳೂರು, ಏಪ್ರಿಲ್, 14: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಮೂಡಿಗೆರೆಯಿಂದ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಮಿಸ್ ಆಗಿತ್ತು. ಇದರಿಂದ ಅಸಮಾಧಾನಗೊಂಡ ಎಂ.ಪಿ.ಕುಮಾರಸ್ವಾಮಿಯವರು ಕೊನೆಗೂ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮೂಡಿಗೆರೆ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ಎಂ.ಪಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿರುವ ಸ್ಪೀಕರ್ ಕಾಗೇರಿ ನಿವಾಸದಲ್ಲಿ ಶುಕ್ರವಾರ (ಏಪ್ರಿಲ್ 14) ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಎಂ.ಪಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮೂಡಿಗೆರೆಯಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು.

ಆದರೆ ಬಿಜೆಪಿ ಅಂತರಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದ ಕಾರಣ ಬಿಜೆಪಿ ಹೈಕಮಾಂಡ್ ದೀಪಕ್ ದೊಡ್ಡಯ್ಯನವರಿಗೆ ಮೂಡಿಗೆರೆ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಅಸಮಧಾನಗೊಂಡಿದ್ದ ಎಂ.ಪಿ ಕುಮಾರಸ್ವಾಮಿ ಇಂದು ಕೊನೆಗೂ ಶಾಸಕ ಸ್ಥಾನದ ಜೊತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ಮೂಲಕ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಮೊದಲನೇ ಪಟ್ಟಿಯ ವಿವರ
ಕಾಫಿನಾಡಿನಲ್ಲಿ 2023ರ ವಿಧಾನಸಭಾ ಚುನಾವಣೆ ರಂಗೇರಿದ್ದು, ಈಗಾಗಲೇ ಮೂರು ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳು ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿವೆ. ಅತ್ಯಂತ ಕುತೂಹಲ ಕೆರಳಿಸಿದ್ದ ಬಿಜೆಪಿ ಮೊದಲ, ಮತ್ತು ಎರಡನೇ ಪಟ್ಟಿಯಲ್ಲಿ ಜಿಲ್ಲೆಯ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿತ್ತು.
ನಿರೀಕ್ಷೆಯಂತೆ ಬಿಜೆಪಿಯಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸಿ.ಟಿ.ರವಿ, ಕಡೂರು ಕ್ಷೇತ್ರದಿಂದ ಬೆಳ್ಳಿ ಪ್ರಕಾಶ್, ತರೀಕೆರೆ ಕ್ಷೇತ್ರದಿಂದ ಡಿ.ಎಸ್.ಸುರೇಶ್, ಶೃಂಗೇರಿ ಕ್ಷೇತ್ರದಿಂದ ಡಿ.ಎನ್.ಜೀವರಾಜ್ ಅವರ ಹೆಸರು ಮೊದಲ ಪಟ್ಟಿಯಲ್ಲಿ ಅಧಿಕೃತಗೊಳಿಸಲಾಗಿದೆ.
ಚುನಾವಣೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗುತ್ತಿದ್ದಂತೆ ಕಾಫಿನಾಡು ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪಕ್ಕಾ ಆಗಿತ್ತು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರು ಪಕ್ಕಾ ಆಗಿತ್ತು. ಶಾಸಕ ಸಿ.ಟಿ.ರವಿ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇದೀಗ ಐದನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಜೆಡಿಎಸ್ ಗೂಡಿಗೆ ಸೇರಿದ ವೈ.ಎಸ್.ವಿ ದತ್ತ
ಇನ್ನು ರಾಜ್ಯ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಅದರಲ್ಲೂ ಕಡೂರೂ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ದತ್ತ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವೈ.ಎಸ್.ವಿ ದತ್ತ ಅವರು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೀಗ ವೈ.ಎಸ್.ವಿ ದತ್ತ ಅವರು ಮರಳಿ ಜೆಡಿಎಸ್ ಗೂಡಿಗೆ ಸೇರಿದ್ದಾರೆ.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಗುರುವಾರ (ಏಪ್ರಿಲ್ 13) ಅಚ್ಚರಿಯ ಬೆಳವಣಿಗೆಯಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಕಡೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾದ ಅವರು ಕಾರ್ಯಕರ್ತರು ಮತ್ತು ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶ ನಡೆಸಿ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ದತ್ತ ಅವರ ಅಸಮಾಧಾನದ ನಡೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡ ಅವರು, ದತ್ತ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದರ ಪರಿಣಾಮವಾಗಿ ಗುರುವಾರ ಯಗಟಿಯಲ್ಲಿರುವ ದತ್ತ ಅವರ ಮನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ಅವರು ದತ್ತ ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ದತ್ತ ಅವರನ್ನು ಜೆಡಿಎಸ್‍ಗೆ ಬರುವಂತೆ ಮನವಿ ಮಾಡಿದರು.











Click it and Unblock the Notifications