ಮ್ಯಾನೇಜರ್ ಸೇರಿ ಐವರಿಗೆ ಕೋವಿಡ್ ಸೋಂಕು; ಬ್ಯಾಂಕ್ ಸೀಲ್ ಡೌನ್
ಚಿಕ್ಕಮಗಳೂರು, ಡಿಸೆಂಬರ್ 21: ಕರ್ನಾಟಕದಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ. ಲಸಿಕೆಯೂ ಕೆಲವು ದಿನಗಳಲ್ಲಿ ಸಿಗಲಿದೆ ಎಂಬ ಜನರ ನಿರೀಕ್ಷೆಗಳ ನಡುವೆ ಬ್ಯಾಂಕ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದ ಕರ್ನಾಟಕ ಬ್ಯಾಂಕ್ ಅನ್ನು ಎರಡು ದಿನ ಮುಚ್ಚಲಾಗಿದೆ.
ಕೋವಿಡ್ ಸೋಂಕು ಹಬ್ಬುವ ಆತಂಕದ ಕಾರಣದಿಂದಾಗಿ ಕರ್ನಾಟಕ ಬ್ಯಾಂಕ್ ಅನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಬ್ಯಾಂಕ್‍ನ ಮ್ಯಾನೇಜರ್ ಸೇರಿದಂತೆ ಐವರು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಹಾಗೂ ಶನಿವಾರ ಬ್ಯಾಂಕ್ ಬಂದ್ ಮಾಡಲಾಗಿತ್ತು.
ಶುಕ್ರವಾರ, ಶನಿವಾರ ಸೀಲ್ ಡೌನ್ ಮಾಡಲಾಗಿತ್ತು. ಭಾನುವಾರ ರಜೆ ದಿನವಾಗಿದ್ದರಿಂದ ಸೋಮವಾರ ಬ್ಯಾಂಕ್ ಮತ್ತೆ ವಹಿವಾಟು ಆರಂಭಿಸಲಿದೆ. ಬ್ಯಾಂಕ್ ಮುಚ್ಚಿದ್ದರಿಂದ ಕಳಸ ಪಟ್ಟಣದ ಜನರು ತೀವ್ರ ಸಮಸ್ಯೆ ಎದುರಿಸಿದರು.

ಪಟ್ಟಣದ ಸುತ್ತಮುತ್ತ ಅಡಿಕೆ, ಕಾಫಿ ತೋಟವೇ ಹೆಚ್ಚಿದ್ದು, ಈ ಭಾಗದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆಯೂ ಹೆಚ್ಚಿದೆ. ಗ್ರಾಮೀಣ ಭಾಗವಾದ್ದರಿಂದ ಬಹುತೇಕ ಕೂಲಿ ಕಾರ್ಮಿಕರು ಕರ್ನಾಟಕ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾರೆ.
ಮೂರು ದಿನಗಳಿಂದ ಹಣ ಬಿಡಿಸಲು ಸಾಧ್ಯವಾಗದೇ ಜನರು ಸಂಕಷ್ಟ ಅನುಭವಿಸಿದರು. ಕೂಲಿ ಮಾಡಿದ ಕಾರ್ಮಿಕರಿಗೆ ವೇತನ ಪಾವತಿ ಮಾಡಲು ಸಹ ಇದರಿಂದಾಗಿ ಸಾಧ್ಯವಾಗಿಲ್ಲ. ಇಂದನಿಂದ ವಹಿವಾಟು ಮತ್ತೆ ಆರಂಭವಾಗಲಿದೆ.
ಕೋವಿಡ್ ಸೋಂಕು ಕಡಿಮೆಯಾಗಿದೆ ಎಂಬ ಕಾಲದಲ್ಲಿ ಬ್ಯಾಂಕ್ ಸೀಲ್ ಡೌನ್ ಆಗಿದ್ದು, ಜನರ ಆತಂಕವನ್ನು ಹೆಚ್ಚಿಸಿತ್ತು. ಈ ಬ್ಯಾಂಕಿನಲ್ಲಿ 7 ಜನ ಕೆಲಸ ಮಾಡುತ್ತಿದ್ದು, ಐವರು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿದೆ.
ಭಾನುವಾರದ ವರದಿ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 19 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 13,592. ಸಕ್ರಿಯ ಪ್ರಕರಣಗಳು 145.












Click it and Unblock the Notifications