ಪುನೀತ್ ರಾಜ್‌ಕುಮಾರ್ ಪ್ರೇರಣೆಯಿಂದ ದೇಹದಾನಕ್ಕೆ ಮುಂದಾದ ಕಾಫಿನಾಡ ದಂಪತಿ
ಚಿಕ್ಕಮಗಳೂರು, ನವೆಂಬರ್ 13: ಸತ್ತಮೇಲೆ ಈ ದೇಹವನ್ನು ಮಣ್ಣು ತಿನ್ನುತ್ತದೆ ಅದರ ಬದಲು ಪುನೀತ್ ಸರ್ ಅವರಂತೆ ದಾನ ಮಾಡಿದರೆ ಈ ನಮ್ಮ ದೇಹದ ಅಂಗಾಂಗಳಿಂದ ಮತ್ತೊಬ್ಬರ ಬದುಕು ಬೆಳಕಾಗುತ್ತದೆ ಎಂದು ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದ ಪುನೀತ್ ರಾಜ್‌ಕುಮಾರ್ ಅಭಿಮಾನಿ ದಂಪತಿಗಳು ತಮ್ಮ ದೇಹವನ್ನೇ ದಾನ ಮಾಡಲು ಮುಂದಾಗಿದ್ದಾರೆ.
ನಮ್ಮ ಈ ನಡೆಗೆ ಪುನೀತ್ ರಾಜ್‌ಕುಮಾರ್‌ರವರ ಪ್ರೇರೇಪಣೆಯೇ ಕಾರಣ ಎಂದು ತಮ್ಮ ನಿರ್ಧಾರದ ಕುರಿತು ಮಾಹಿತಿ ನೀಡಿದ್ದಾರೆ. ತಾಲೂಕಿನ ಅರೆನೂರು ಗ್ರಾಮದ ಸುಪ್ರಿತ್ ಹಾಗೂ ಲಕ್ಷ್ಮಿ ದಂಪತಿ ತಮ್ಮ ದೇಹವನ್ನು ಉಡುಪಿಯ ಕೆವೈಸಿ ಆಸ್ಪತ್ರೆಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ಮನುಷ್ಯನಾಗಿ ಹುಟ್ಟಿ, ಸತ್ತ ಬಳಿಕ ಈ ದೇಹವನ್ನು ಮಣ್ಣಲ್ಲಿ ಕೊಳೆಸುವುದಕ್ಕಿಂತ ನಮ್ಮ ದೇಹದ ಅಂಗಾಂಗಳು ಮತ್ತೊಬ್ಬರಿಗೆ ಉಪಯೋಗಕ್ಕೆ ಬರಬೇಕು ಎಂದು ಸುಪ್ರಿತ್ ಹಾಗೂ ಲಕ್ಷ್ಮಿ ದಂಪತಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ನಾವು ಚಿಕ್ಕಂದಿನಿಂದಲೂ ಪುನೀತ್ ಸರ್ ಸಿನಿಮಾ ನೋಡಿಕೊಂಡು ಬಂದಿದ್ದೇವೆ. ಒಂದೊಂದು ಸಿನಿಮಾಗಳು ಒಂದಕ್ಕಿಂತ ಚೆನ್ನಾಗಿವೆ. ನಮ್ಮ ಈ ನಡೆಗೆ ಅವರೇ ಪ್ರೇರೇಪಣೆ ಎಂದಿದ್ದಾರೆ. ಅವರು ಅಷ್ಟು ದೊಡ್ಡ ವ್ಯಕ್ತಿಯಾದರೂ ಅವರ ಸಮಾಜಮುಖಿ ಕಾರ್ಯಗಳು ಬಹುತೇಕರಿಗೆ ಗೊತ್ತಿರಲಿಲ್ಲ. ನಮಗೂ ಗೊತ್ತಿರಲಿಲ್ಲ. ಅವರು ಸತ್ತ ಬಳಿಕವಷ್ಟೇ ಗೊತ್ತಾಗಿದ್ದು ಎಂದು ಹೇಳಿದರು.
ಪುನೀತ್ ಸರ್ ಅವರೇ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ ಅಂದರೆ, ದೇಹವನ್ನು ಮಣ್ಣು ತಿನ್ನುವುದಕ್ಕಿಂತ ನಾಲ್ಕು ಜನಕ್ಕೆ ಬೆಳಕಾಗಿಸಬಹುದು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ ಅಂತಾರೆ ಈ ದಂಪತಿ.
ದೇಹದಾನಕ್ಕೆ ಮುಂದಾಗಿರುವ ಲಕ್ಷ್ಮಿ ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೂಡ. ಗಂಡ- ಹೆಂಡತಿ ಮಾತನಾಡಿಕೊಂಡು, ಮನೆಯವರ ಒಪ್ಪಿಗೆ ಪಡೆದು ಈ ನಿರ್ಧಾರಕ್ಕೆ ತೆಗೆದುಕೊಂಡಿದ್ದಾರೆ.

ಇನ್ನು ಪುನೀತ್ ರಾಜ್‌ಮಾರ್ ಪತ್ನಿ ಅಶ್ವಿನಿಯವರ ಊರಾದ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಭಾಗ್‍ಮನೆ ಬಳಿ ಇರುವ ಆವುತಿ ಗ್ರಾಮದಲ್ಲಿ ಪುನೀತ್ ರಾಜ್‍ಕುಮಾಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ವೇಳೆ ಸುಮಾರು 40ಕ್ಕೂ ಹೆಚ್ಚು ಜನ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಹೆಸರು ನೋಂದಾಯಿಸಿಕೊಂಡವರು ನಮ್ಮ ಬಳಿಕ ನಮ್ಮ ಕಣ್ಣುಗಳು ಮತ್ತೊಂದು ಜೀವ ಜಗತ್ತನ್ನು ನೋಡಲು ಸಹಕಾರಿಯಾಗಲಿದೆ. ಇದಕ್ಕೆ ನಮಗೆ ಪುನೀತ್ ರಾಜ್‌ಕುಮಾರ್ ಪ್ರೇರಣೆ ಎಂದು ನೇತ್ರದಾನಕ್ಕೆ ಮುಂದಾಗಿದ್ದಾರೆ. ಬದುಕಿದ್ದಷ್ಟು ದಿನ ಭಾವನಾತ್ಮಕ ಜೀವಿಯಾಗಿದ್ದ ಪವರ್ ಸ್ಟಾರ್ ಪುನೀತ್ ಸಾವಿನ ಬಳಿಕ ಸಮಾಜಮುಖಿ ಸೇವೆಯಿಂದ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.