ನಾನು ಸುಳ್ಳು ಹೇಳುವ ರಾಜಕಾರಣಿ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ಸಿ.ಟಿ.ರವಿ
ಸುಳ್ಳು ಹೇಳುವುದು ನಮ್ಮ ಸಂಸ್ಕೃತಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು, ಫೆಬ್ರವರಿ, 05: ಕಾಂಗ್ರೆಸ್‍ನವರು ಪಾಕಿಸ್ತಾನದಲ್ಲಿ ಸರ್ವೆ ನಡೆಸಿದರೇ 150 ರಿಂದ 200 ಸ್ಥಾನಗಳು ಬರಬಹುದು. ಅದು ನಮ್ಮ ರಾಜ್ಯ, ದೇಶದಲ್ಲಿ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಸರ್ವೇ ಕುರಿತು ಚಿಕ್ಕಮಗಳೂರಿನಲ್ಲಿ ವ್ಯಂಗ್ಯವಾಡಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವೋಟು ದಿನೇ ದಿನೇ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಡಿಪಾಸಿಟ್ ಉಳಿಸಿಕೊಳ್ಳುವುದು ಕಷ್ಟ ಎನ್ನುವ ಸ್ಥಿತಿಗೆ ಬಂದಿದೆ. ಸುಳ್ಳು ಯಾರು ಹೇಳುತ್ತಾರೆಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ರದ್ದು ಮಾಡಿದರು. ದತ್ತಪೀಠಕ್ಕೆ ಮೋಸ ಮಾಡಿದರು. ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಗ್ಯಾಂಗ್ ಬೆಂಬಲಿಸಿದರು. ಎಸ್‍ಡಿಪಿಐ ಮೇಲಿನ ಕೇಸ್ ಹಿಂಪಡೆದರು ಅವರು ಎಂದರು.
ಜನರು 25 ಅಭ್ಯರ್ಥಿಗಳನ್ನ ಗೆಲ್ಲಿಸಿದರು
ಇನ್ನು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟ್ ಬರುವುದಿಲ್ಲ ಅಂದಿದ್ದರು. ಜನರು ಬಿಜೆಪಿಯ 25 ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಅಪ್ಪನ ಆಣೆ ಬಿಎಸ್‍ವೈ ಸಿ.ಎಂ.ಆಗಲ್ಲ ಅಂದಿದ್ದರು. ಆದರೆ ಬಿಎಸ್‍ವೈ ಸಿ.ಎಂ. ಆದರು. ಇದರಲ್ಲೇ ಗೊತ್ತಾಗುತ್ತದೆ ಸುಳ್ಳು ಹೇಳಿದವರು ಯಾರು ಅಂತಾ ಗೊತ್ತಾಗುತ್ತದೆ ಎಂದರು.

ನಾನು ಪಕ್ಕಾ ಆರ್‍ಎಸ್‍ಎಸ್‌ನವನು
ನಾನು ಪಕ್ಕಾ ಆರ್‍ಎಸ್‍ಎಸ್, ಅದರಲ್ಲಿ ಅನುಮಾನವೇ ಇಲ್ಲ. ಸಂಘ ಸಂಸ್ಕಾರ ಮತ್ತು ದೇಶಭಕ್ತಿಯನ್ನು ಕಲಿಸುತ್ತದೆ. ನಾನು ಸುಳ್ಳು ಹೇಳುವ ರಾಜಕಾರಣಿಯಲ್ಲ. ನಾವು ಏನು ಹೇಳುತ್ತೇವೆಯೋ ಅದನ್ನೇ ಮಾಡುತ್ತೇವೆ. ಏನು ಮಾಡುತ್ತೀವೋ ಅದನ್ನೇ ಹೇಳುತ್ತೇವೆ. ಮೀಸಲಾತಿ ಹೆಚ್ಚಳ ಮಾಡುತ್ತೇವೆಂದು ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದೆ. ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಜಿ.ಪರಮೇಶ್ವರ್ ಮತ್ತು ಮುನಿಯಪ್ಪ ಅವರನ್ನು ಸೋಲಿಸಿದ್ದು ಕಾಂಗ್ರೆಸಿಗರು. ಸಿದ್ದರಾಮಯ್ಯ ಎದೆಯೊಳಗಿಂದ ನಾನೇ ಸೋಲಿಸಿದ್ದು ಎಂದು ಕೇಳಿಸುತ್ತದೆ. ಪರಮೇಶ್ವರ್ ಸೋಲಿಸಲು ಹಫ್ತಾ ಯಾರಿಗೆ ಕೊಟ್ಟಿದ್ದಾರೆಯೇ ಅವರೇ ಹೊರಗಡೆ ಅದನ್ನು ಹೇಳಿದ್ದಾರೆ ಎಂದರು.

ಮಾಜಿ ಸಚಿವ ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಹೇಳುತ್ತಿದ್ದೆ. ಪಕ್ಷ ಕಟ್ಟಿದವರಲ್ಲಿ ಈಶ್ವರಪ್ಪ ಅವರು ಒಬ್ಬರಾಗಿದ್ದಾರೆ. ಅವರು ಹಿರಿಯ ನಾಯಕರಾಗಿದ್ದಾರೆ. ಹಾಗಾಗಿ ಅವರ ಮೇಲೆ ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ತನಿಖೆಯಿಂದ ಅವರ ಪಾತ್ರವಿಲ್ಲ ಎನ್ನುವುದು ಸಾಭೀತಾಗಿದೆ. ಅವರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.












Click it and Unblock the Notifications