ಕಾಫಿನಾಡಿನ ಹಲವೆಡೆ ಮಳೆರಾಯನ ಅಟ್ಟಹಾಸ, ಎಲ್ಲೆಲ್ಲಿ?, ಇಲ್ಲಿದೆ ವಿವರ
ಚಿಕ್ಕಮಗಳೂರು, ಜೂನ್, 08: ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬೆಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಪರಿಣಾಮ ಜಿಲ್ಲೆಯ ಕೆಲವೆಡೆ ದೊಡ್ಡ ಅನಾಹುತಗಳೇ ಸಂಭವಿಸಿವೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಿದೆ ಎನ್ನುವ ವಿವರನ್ನು ಇಲ್ಲಿ ತಿಳಿಯಿರಿ.
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪವಿರುವ ಹುಲಿಕೆರೆ, ಕೇತುಮಾರನಹಳ್ಳಿ ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದ ದೊಡ ಅನಾಹುತವವೇ ಸಂಭವಿಸಿದೆ. ಕೆರೆಕೋಡಿಗಳು ಭರ್ತಿಯಾಗಿ ಕೋಡಿ ನೀರು ಸೇತುವೆ, ರಸ್ತೆ ಮೇಲೆ ಹರಿದಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಜಮೀನು-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಆಗಿದೆ. ಇನ್ನು ಕೆಲವು ಕಡೆ ಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡು ಜನ ಪರದಾಡುವಂತೆ ಆಗಿದೆ. ಇನ್ನು ಬೆಳೆ ನಾಶವಾಗಿದ್ದರಿಂದ ರೈತರಿಗೆ ದಿಕ್ಕೆತೋಚದಂತಾಗಿದೆ. ಹೀಗಾಗಿ ರೈತರು ಬೆಳೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ
ಈಗಾಗಲೇ ಮುಂಗಾರು ಪೂರ್ವ ಮಳೆ ರಾಜ್ಯದ ಹಲವೆಡೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದರೆ, ಮತ್ತೊಂದೆಡೆ ಇದೀಗ ಕೆಲವು ಕಡೆ ಬಿಸಿಲಿನ ಧಗೆ ಹೆಚ್ಚಾಗುತ್ತಲೇ ಇದೆ. ಇದರಿಂದ ಬೇಸತ್ತ ಜನರು ಮಳೆರಾಯ ಯಾವಾಗ ಕಾದ ಭೂಮಿಯನ್ನು ತಂಪು ಮಾಡುತ್ತಾನೋ ಎಂದು ಕಾದುಕುಳಿತಿದ್ದಾರೆ. ಹಾಗಾದರೆ ಹವಾಮಾನ ಇಲಾಖೆಯ ಪ್ರಕಾರ ಇಂದಿನ ವಾತಾರಣ ಹೇಗಿರಲಿದೆ. ಹಾಗೆಯೇ ಯಾವ ಭಾಗಗಳಲ್ಲಿ ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮಳೆಯಾಗಿದ್ದು, ಬುಧವಾರ ಬಿಸಿಲಿನ ವಾತಾವರಣ ಮುಂದುವರೆದಿತ್ತು. ನಗರದಲ್ಲಿ ಮಳೆರಾಯ ಒಂದು ದಿನ ಬಿಡುವು ನೀಡಿದ್ದಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗಿ ಇಲ್ಲಿನ ಜನರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಕೂಡ ಇಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಸಂಜೆ ವೇಳೆಗೆ ಮಳೆಯಾಗುವ ಮುನ್ಸೂಚನೆ ಇದೆ.
ಮತ್ತೊಂದೆಡೆ ಮುಂಗಾರು ಮಳೆ ವಿಳಂಬ ಹಿನ್ನೆಲೆ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಶುಕ್ರವಾರ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆಯಿದೆ. ಹಾಗೆಯೇ ಮತ್ತೊಂದೆಡೆ ಇಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಅಂತಲೂ ಹವಾಮಾನ ಇಲಾಖೆ ಸಂದೇಶವನ್ನು ರವಾನಿಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಇದರ ಜೊತೆ ಗಾಳಿಯ ವೇಗವು ಕೂಡ ಹೆಚ್ಚಾಗಿದೆ. ಅಲ್ಲದೆ ಬೆಂಗಳೂರ ಸೇರಿದಂತೆ ಇಲ್ಲಿನ ಸುತ್ತಮುತ್ತಲಿನ ಕೆಲವು ಜಿಲ್ಲೆಗಳು ಮತ್ತು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಸಂಭವ ಇದೆ. ಕರಾವಳಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ. ಇಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ಇರಲಿದೆ ಎಂದು ತಿಳಿಸಿದೆ.
ಇದೀಗ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಆದರೆ ಸಂಜೆ ವೇಳೆಗೆ ನಗರದ ಹಲವೆಡೆ ಮಳೆರಾಯ ಅಬ್ಬರಿಸಲಿದ್ದಾನೆ. ಕೆಲವೊಮ್ಮೆ ಬಲವಾದ ಮೇಲ್ಮೈ ಸುಳಿಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.
ಇನ್ನು ಇಂದು ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆಯಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಹಾಸನ, ಮೈಸೂರು, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾವಗುವ ಸಂಭವ ಇದೆ ಎನ್ನುವ ಮಾಹಿತಿಯನ್ನು ನೀಡಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಗಾಳಿಯ ವೇಗವು ಗಂಟೆಗೆ 35-45 ಕಿ.ಮೀ.ನಿಂದ 55 ಕಿ.ಮೀ.ನಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯ ಸಂದೇಶವನ್ನು ಸಹ ರವಾನಿಸಲಾಗಿದೆ.
ಇನ್ನು ಬುಧವಾರ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ತಲಾ 3 ಸೆಂ.ಮೀ. ಮಳೆ ಬಿದ್ದಿದೆ. ಕಲಬುರ್ಗಿ ಜಿಲ್ಲೆಯ ಮಹಾಗಾವ್, ಯಾದಗಿರಿ ಜಿಲ್ಲೆಯ ಶೋರಪುರದಲ್ಲಿ ತಲಾ 1 ಸೆಂ.ಮೀ. ಮಳೆ ಬಿದ್ದಿದೆ. ಹಾಗೆಯೆ ರಾಜ್ಯದಲ್ಲಿ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ 39.9 ಡಿಗ್ರಿ ಸೆಲ್ಸಿಯಸ್ ಕಲಬುರಗಿ ಜಿಲ್ಲೆಯಲ್ಲಿ ದಾಖಲಾಗಿದೆ.












Click it and Unblock the Notifications