ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಕಾರ ಮಳೆ
ಚಿಕ್ಕಮಗಳೂರು, ಜುಲೈ, 19: ಮುಂಗಾರು ಆರಂಭವಾದಾಗಿನಿಂದಲೂ ದಕ್ಷಿಣ ಕನ್ನದ ಜಿಲ್ಲೆಯ ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಆದರೆ ಇದೀಗ ರಾಜ್ಯದ ಬಹುತೇಕ ಕಡೆ ಮುಂಗಾರು ಚುರಕು ಪಡೆದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಅದೇ ರೀತಿ ರೀತಿ ಇಂದು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕಿನಾದ್ಯಂತ ಇಂದು ಮುಂಜಾನೆಯಿಂದಲೂ ಭಾರೀ ಮಳೆ ಸುರಿಯುತ್ತಲೇ ಇದೆ. ಅದರಲ್ಲೂ ಭಾರೀ ಮಳೆ ಹಿನ್ನೆಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ.

ವಾಹನ ಸವಾರರ ಪರದಾಟ
ಹಾಗೆಯೇ ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡೇ ಹರಿದುತ್ತದೆ. ಅದೇ ರೀತಿ ಇಂದು ಕೂಡ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನೋಡಲು ಪ್ರವಾಸಿಗರು ಕಿಕ್ಕಿರಿದು ಆಗಮಿಸಿದ್ದಾರೆ. ಆದರೆ ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ವಾಹನ ಚಾಲನೆ ಮಾಡಲು ಸವಾರರು ಪರದಾಡಿದ ಘಟನೆಯೂ ನಡೆದಿತ್ತು.
ಕಿರಿದಾದ ಸಾವಿರಾರು ಅಡಿ ಪ್ರಪಾತದ ರಸ್ತೆಯಲ್ಲಿ ವಾಹನ ಚಾಲನೆಗೆ ದಟ್ಟನೆಯ ಮಂಜು ಅಡ್ಟಿಯಾಗುತ್ತಿದೆ. ಇನ್ನು ಬೇರೆ ದಾರಿಯಿಲ್ಲದೆ ವಾಹನಗಳ ಹೆಡ್ ಲೈಟ್ ಹಾಕಿಕೊಂಡು ಸವಾರರು ಚಾಲನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಈ ವಾಹನಗಳ ಹೆಡ್‌ಲೈಟ್‌ಗಳು ಎದುರುಗಡೆ ಬರುವ ಸವಾರರ ಕಣ್ಣಿಗೆ ನೇರವಾಗಿ ಬೀಳುತ್ತಿದ್ದು, ಇದರಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಹಾಗೆಯೇ ಕಳೆದ 5 ನಾಲ್ಕು ದಿನಗಳಿಂದ ಚಾರ್ಮಾಡಿ ಘಾಟ್‌ನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಮಂಜು ಹೆಚ್ಚಾಗಿದೆ. ಸಣ್ಣ ಪ್ರಮಾಣದ ಮಳೆ ಹಾಗೂ ಮಂಜಿನ ಆಟಕ್ಕೆ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.
ದಟ್ಟವಾದ ಮಂಜು ರಸ್ತೆಯನ್ನು ಆವರಿಸುವುದರಿಂದ ನಿಧಾನಗತಿಯಲ್ಲಿ ವಾಹನ ಚಲಾವಣೆ ಮಾಡಲಾಗುತ್ತದೆ. ಒಂದು ವೇಳೆ ಇಲ್ಲಿ ಈ ಸಮಯದಲ್ಲಿ ಜೋರಾಗಿ ವಾಹನ ಚಾಲನೆ ಮಾಡಿದರೆ ಅಪಘಾತ ಆಗುವು ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನಿಧಾನಗತಿಯಲ್ಲಿ ವಾಹನ ಚಾಲನೆ ಮಾಡುತ್ತಿದ್ದು, ಇದರಿಂದ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ.












Click it and Unblock the Notifications