ಮುಂದುವರೆದ ಭಾರೀ ಮಳೆ: ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಹಲವು ಶಾಲೆಗಳಿಗೆ ರಜೆ ಘೋಷಣೆ
ಚಿಕ್ಕಮಗಳೂರು, ಜುಲೈ, 06: ವರುಣಾರ್ಭಟ ಮುಂದುವರೆದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಆಯ್ದ ಭಾಗದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯಲ್ಲಿ ಮಕ್ಕಳು ಶಾಲೆಗೆ ಹೋಗಲು ಕಷ್ಟವಾಗುತ್ತದೆ. ಹಾಗೆಯೇ ಕಟ್ಟಡಗಳು ಹಳೆಯದಾಗಿದ್ದು ದುರಸ್ಥಿ ಕಾರ್ಯ ಅಗತ್ಯವಿದೆ.
ಆದ್ದರಿಂದ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗೃತ ಕ್ರಮವಾಗಿ ಆಯ್ದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಬಿಇಓ ಆದೇಶ ಹೊರಡಿಸಿದ್ದಾರೆ. ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು, ಆವತಿ ಹೋಬಳಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಚಿಕ್ಕಮಗಳೂರು ಬಿಇಓ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಕಳಸ-ಕುದುರೆಮುಖ ಮಾರ್ಗದ ರಸ್ತೆ ಬಿರುಕು
ಈಗಾಗಲೇ ಭಾರೀ ಮಳೆ ಸುರಿದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಕಳಸ-ಕುದುರೆಮುಖ ಮಾರ್ಗದ ರಸ್ತೆ ಬಿರುಕು ಬಿಟ್ಟಿದೆ. ಕಳಸದಿಂದ ಒಂದು ಕಿ.ಮೀ. ದೂರದಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಕಳೆದ ವರ್ಷ ರಸ್ತೆ ಕುಸಿತ ಕಂಡಿದ್ದ ಈ ಸ್ಥಳದಲ್ಲಿ ವಾಲ್ ನಿರ್ಮಾಣ ಮಾಡಿ ಕಾಮಗಾರಿ ನಡೆಸಲಾಗಿತ್ತು. ಇದೀಗ ಮತ್ತೆ ಕಾಮಗಾರಿ ನಡೆದ ಸ್ಥಳದಲ್ಲಿಯೇ ರಸ್ತೆ ಬಿರುಕು ಬಿಟ್ಟಿದ್ದು, ಇದರಿಂದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.
ನೀರಿನ ಮಟ್ಟದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆ
ಇನ್ನು ನಿರಂತರ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯ ನೀರಿನ ಮಟ್ಟದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆನೆ ಹೇಮಾವತಿ ನದಿ ಪಾತ್ರದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಜನಜೀವನ ಅಸ್ತವ್ಯಸ್ಥ
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಪರಿಣಾಮ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ನದಿಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲೂ ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಭಾರೀ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಘಟ್ಟ ಪ್ರದೇಶದಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ.
ಕುದುರೆಮುಖ ಸಾಲಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಭದ್ರಾ ನದಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ತುಂಗಾ, ಭದ್ರಾ, ಹೇಮಾವತಿ ನದಿಗಳ ಒಳಹರಿವಿನ ಪ್ರಮಾಣವು ಕೂಡ ಏರಿಕೆಯಾಗಿದೆ. ಇನ್ನು ಶೃಂಗೇರಿ ತಾಲೂಕಿನ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ಒಳ ಹರಿವಿನಲ್ಲಿ ಭಾರೀ ಏರಿಕೆಯಾಗಿದೆ.












Click it and Unblock the Notifications