ವರುಣಾರ್ಭಟಕ್ಕೆ ಕಾಫಿನಾಡು ತತ್ತರ: ಚಿಕ್ಕಹಳ್ಳ ಗ್ರಾಮದಲ್ಲಿ ದ್ವಿಚಕ್ರ ವಾಹನದ ಮೇಲೆ ಮರಬಿದ್ದು ಓರ್ವ ಬಲಿ
ಚಿಕ್ಕಮಗಳೂರು, ಮೇ, 22: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಅದರಲ್ಲೂ ರೈತರಿಗೆ ಈ ಮಳೆ ಸಂತಸ ತಂದಿದ್ದರೆ, ಮತ್ತೆ ಕೆಲವೆಡೆ ಅನಾಹುತಗಳು ಸಹ ಸೃಷ್ಟಿಯಾಗಿವೆ. ಹಾಗೆಯೆ ಮೊದಲ ಮಳೆಯೇ ವ್ಯಕ್ತಿಯೋರ್ವನ ಬಲಿ ಪಡೆದುಕೊಂಡ ಘಟನೆ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಗ್ರಾಮದ ಬಳಿ ನಡೆದಿದೆ.
ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಮರ ಮೇಲೆ ಬಿದ್ದ ಹಿನ್ನೆಲೆ, ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಗ್ರಾಮದ ಬಳಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ವೇಣುಗೋಪಾಲ್ (45) ಮೃತಪಟ್ಟ ವ್ಯಕ್ತಿ ಆಗಿದ್ದು, ಇವರು ಚಿಕ್ಕಹಳ್ಳ ಗ್ರಾಮದಲ್ಲಿ ಹೋಮ್ ಸ್ಟೇ ನಡೆಸುತ್ತಿದ್ದರು. ಮೂಡಿಗೆರೆ ಸುತ್ತಮುತ್ತ ಭಾನುವಾರ ಮಧ್ಯಾಹ್ನದ ವೇಳೆ ಬಿರುಗಾಳಿ ಸಮೇತ ಭಾರೀ ಮಳೆಯಾಗಿದ್ದು, ಈ ವೇಳೆ ವೇಣುಗೋಪಾಲ್ ಸ್ಕೂಟಿಯಲ್ಲಿ ತೆರಳುವಾಗ ಮೇಲೆ ಮರ ಬಿದ್ದು ಅವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉತ್ತರ ಕರ್ನಾಟಕ ಮೂಲದವರಾದ ವೇಣುಗೋಪಾಲ್ ಅವರು ಮೂಡಿಗೆರೆಯಲ್ಲಿ ನೆಲೆಸಿದ್ದರು. ಹೋಮ್ ಸ್ಟೇ ಹಾಗೂ ಮೂಡಿಗೆರೆ ಪಟ್ಟಣದಲ್ಲಿ ಬಳೆ ಅಂಗಡಿ ಇಟ್ಟುಕೊಂಡಿದ್ದರು. ಇನ್ನು ಗಾಳಿಯ ಆರ್ಭಟಕ್ಕೆ ಮೂರು ಮರಗಳು ಏಕಕಾಲದಲ್ಲಿ ಬಿದ್ದ ಪರಿಣಾಮ, ಮರದಡಿ ಸಿಲುಕಿದ ವೇಣುಗೋಪಾಲ್ ಅವರು ಸ್ಥಳದಲ್ಲೇ ವೃತಪಟ್ಟಿದ್ದಾರೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ
ಇನ್ನು ಬಿಸಿಲಿನ ಧಗೆಗೆ ಬೆಂಕಿಯಂತೆ ಕಾದಿದ್ದ ಕಾಫಿನಾಡ ಮಲೆನಾಡು ಭಾಗದ ಭೂಮಿಗೆ ವರುಣದೇವ ತಂಪೆರೆದಿದ್ದಾನೆ. ಭಾನುವಾರ ಸತತ 2 ಗಂಟೆಗಳ ಕಾಲ ಮೂಡಿಗೆರೆ ತಾಲೂಕಿನ ಸುತ್ತಮುತ್ತ ಧಾರಾಕಾರವಾಗಿ ಆಲಿಕಲ್ಲು ಮಳೆ ಸುರಿದಿದ್ದು, ಈ ಹಿನ್ನೆಲೆ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್ ಬಾಳೂರು, ಹೊರಟ್ಟಿ, ಸಬ್ಬೇನಹಳ್ಳಿ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆ ಆಗಿದೆ. ಇದೀಗ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೊಂದೆಡೆ ಭಾರಿ ಮಳೆ-ಗಾಳಿಯಿಂದ ಕೊಟ್ಟಿಗೆಹಾರ ಹಾಗೂ ಚಾರ್ಮಡಿ ಘಾಟ್‌ನಲ್ಲಿ ಅಲ್ಲಲ್ಲಿ ವಾಹನದಟ್ಟಣೆ ಕೂಡ ಉಂಟಾಗಿದೆ.
ಮಲೆನಾಡಿಗರಿಗೆ ಮಳೆ ತೀರಾ ಅನಿವಾರ್ಯ ಆಗಿತ್ತು. ಮಳೆ ಇಲ್ಲದೆ ಕೃಷಿಕರಿಗೆ ಕಾಫಿ, ಅಡಿಕೆ ಹಾಗೂ ಮೆಣಸನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಬೆಳೆಗಳಿಗೆ ನಿತ್ಯ ನೀರಿನ ಸೌಲಭ್ಯ ಕಲ್ಪಿಸುವುದು ಅಸಾಧ್ಯವಾಗಿತ್ತು. ಕಳೆದ ವರ್ಷ ಈ ವೇಳೆ ಮಲೆನಾಡಿನಲ್ಲಿ ಸಮೃದ್ಧ ಮಳೆ ಆಗಿತ್ತು. ಹಾಗಾಗಿ, ಮೇ ಮುಗಿಯುವ ಹಂತಕ್ಕೆ ಬಂದರೂ ಮಳೆಯಾಗದಿದ್ದನ್ನು ಕಂಡು ಮಲೆನಾಡಿಗರು ಆತಂಕಕ್ಕೆ ಒಳಗಾಗಿದ್ದರು.
ನಿತ್ಯ ಸಂಜೆ ವೇಳೆಗೆ ಮೋಡ ಕಡುಗಟ್ಟುತ್ತಿದ್ದರೂ ಮಳೆ ಆಗುತ್ತಿರಲಿಲ್ಲ. ಇದೀಗ, ಭಾರೀ ಗುಡುಗು-ಸಿಡಿಲಿನ ಸಮೇತ ಧಾರಾಕಾರವಾಗಿ ಆಲುಕಲ್ಲು ಮಳೆ ಸುರಿಯುತ್ತಿದ್ದು, ಇದರಿಂದ ಮಲೆನಾಡಿಗರು ಸಂತಸಗೊಂಡಿದ್ದಾರೆ.
ಗಡಿ ಜಿಲ್ಲೆಯಲ್ಲೂ ವರುಣಾರ್ಭಟ
ಭಾನುವಾರ (ಮೇ 21) ರಂದು ಅಬ್ಬರದ ಮಳೆ ಸುರಿದ ಕಾರಣ ರಾಜ್ಯದ ಹಲವೆಡೆ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಅದೇ ರೀತಿ ಅಬ್ಬರದ ಮಳೆಗೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಮನೆಗಳು, ದಿನಬಳಕೆ ವಸ್ತುಗಳು, ಕೃಷಿ ಬೆಳೆಗಳು, ಕ್ರೀಡಾಂಗಣ ಸಂಪೂರ್ಣವಾಗಿ ಜಲಾವೃತವಾಗಿವೆ. ಇದರಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾದರೆ ಜಿಲ್ಲೆಯ ಯಾವ ಭಾಗಗಳಲ್ಲಿ ಹೆಚ್ಚು ಹಾನಿ ಆಗಿದೆ ಎಂದು ಇಲ್ಲಿ ತಿಳಿಯಿರಿ.
ಹನೂರು ತಾಲೂಕು ವ್ಯಾಪ್ತಿಯಲ್ಲಿ ವಿವಿಧಡೆ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಕೆಲವಡೆ ಮರಗಳು ಮುರಿದು ಬಿದ್ದಿವೆ. ಇನ್ನೂ ಕೆಲವಡೆ ಮನೆ ಮೇಲ್ಚಾವಣಿ ಹಾರಿ ಹೋಗಿರುವ ಘಟನೆಗಳು ಜರುಗಿವೆ.
ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿರುವ ಪರಿಣಾಮ ಕೆಲವಡೆ ಮರಗಳು ಮುರಿದು ಬಿದ್ದು ಸಂಚಾರಕ್ಕೆ ತೊಂದರೆ ಆಗಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಇನ್ನು ಹನೂರು ಪಟ್ಟಣದಲ್ಲಿ ಬಾಲು ಎಂಬುವವರ ಮನೆ ಮೇಲೆ ಇರುವ ನೀರಿನ ಟ್ಯಾಂಕ್‌ನ ಮೇಲೆ ಮರವೊಂದು ಮುರಿದು ಬಿದ್ದು, ಟ್ಯಾಂಕ್ ಹೊಡೆದು ಹೋಗಿದೆ. ಜೊತೆಗೆ ಮನೆಯ ಮೇಲೆ ಮರ ಬಿದ್ದಿರುವುದರಿಂದ ಗೋಡೆಗೂ ಹಾನಿ ಆಗಿದೆ.
ಅಲ್ಲದೇ ಕೆ.ಇ.ಬಿ ಮುಂಭಾಗ ಇರುವ ಬಡಾವಣೆಯೊಂದರ ಕ್ರಷ್ಣ ನಾಯ್ಡು ಎಂಬುವವರ ಮನೆಯ ಸೀಟ್ ಗಾಳಿಗೆ ಹಾರಿ ಹೋಗಿದ್ದು, ಮತ್ತೊಂದೆಡೆ ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು ನೀರುಪಾಲಾಗಿವೆ.
ಜೋಳದ ಬೆಳೆ ಜಲಾವೃತ
ಹಾಗೆಯೆ ಚಿಂಚಳ್ಳಿ ಮುಖ್ಯ ರಸ್ತೆಯ ಮಾದೇಶ್ ಎಂಬುವವರ ಜಮೀನಿನಲ್ಲಿ ಸುಮಾರು ಮೂರು ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದ ಜೋಳದ ಫಸಲು ಗಾಳಿ ಮಳೆಗೆ ನೆಲಕಚ್ಚಿದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನಷ್ಟಕ್ಕೆ ಒಳಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂಬುದು ಇಲ್ಲಿನ ರೈತರ ಆಗ್ರಹವಾಗಿದೆ












Click it and Unblock the Notifications