ದತ್ತ ಪೀಠಕ್ಕೆ ಬರದಿದ್ದರೆ ಅಧಿಕಾರ ಕಳೆದುಕೊಳ್ಳುತ್ತೀರೆಂದು ಬಿಎಸ್‌ವೈಗೆ ಎಚ್ಚರಿಸಿದ್ದೆ : ಗಂಗಾಧರ್ ಕುಲಕರ್ಣಿ
ಚಿಕ್ಕಮಗಳೂರು, ಅಕ್ಟೋಬರ್ 11 : ದತ್ತಪೀಠದಲ್ಲಿ ನವೆಂಬರ್ 13ರ ಒಳಗೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶ್ರೀರಾಮ ಸೇನೆ ದತ್ತಪೀಠ ವಿಚಾರವಾಗಿ 18 ವರ್ಷಗಳ ಸುಧೀರ್ಘ ಹೋರಾಟ ನಡೆಸುತ್ತಿದೆ. ನ್ಯಾಯಾಲಯ ಹಿಂದೂ ಅರ್ಚಕರ ನೇಮಕ ಮಾಡುವಂತೆ ಆದೇಶಿಸಿದೆ. ಸದನ ಸಮಿತಿ ವರದಿ ನೀಡಿದೆ. ಆದರೆ, ಹಿಂದೂ ಅರ್ಚಕರ ನೇಮಕ ಮಾಡಲು ರಾಜ್ಯ ಸರಕಾರ ಮೀನಾಮೇಷ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನವೆಂಬರ್ 13ರೊಳಗೆ ರಾಜ್ಯ ಸರ್ಕಾರ ಹಿಂದೂ ಅರ್ಚಕರನ್ನು ನೇಮಕ ಮಾಡದಿದ್ದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ಅಹಿತಕರ ಘಟನೆ ಸಂಭವಿಸಿದರೇ ರಾಜ್ಯ ಸರಕಾರವೇ ಹೊಣೆ ಎಂದು ಎಚ್ಚರಿಸಿದ ಅವರು, ರಾಜ್ಯ ಸರಕಾರ ಹಿಂದೂ ಅರ್ಚಕರ ನೇಮಕ ಮಾಡಲು ಮೀನಾಮೇಷ ಮಾಡಿದಲ್ಲಿ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿ ಕಾರಿದರು.

ಇನ್ನು ಸರಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ ಅವರು ಕೋರ್ಟ್‌ನಲ್ಲಿ ಕೇಸ್ ಕ್ಲಿಯರ್ ಆಗಿದೆ. ದತ್ತಪೀಠವನ್ನು ನೀವೇ ಇಟ್ಟುಕೊಂಡು ಮೆರೆದವರು. ಇಲ್ಲಿಯವರೆಗೂ ಅರ್ಚಕರನ್ನು ನೇಮಕ ಮಾಡದೇ ಇರುವುದು ನಾಚಿಕೇಡಿನ ಸಂಗತಿ. ಈಗ ಹಿಂದೂ ಸಮಾಜ ಜಾಗೃತವಾಗಿದೆ. ನವೆಂಬರ್ 13ರ ಒಳಗೆ ಅರ್ಚಕರನ್ನು ನೇಮಕ ಮಾಡಲೇಬೇಕು. ಒಂದು ವೇಳೆ ಮಾಡದಿದ್ದರೆ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭ, ಹಿಂದು ಸಮಾಜ ಯಾವ ರೀತಿ ಆಕ್ರೋಶ ವ್ಯಕ್ತಪಡಿಸಿತ್ತೋ , ಅದೇ ರೀತಿ ಆಕ್ರೋಶ ದತ್ತಪೀಠದಲ್ಲಿ ನೀವು ನೋಡುತ್ತೀರಾ ಎಂದು ಎಚ್ಚರಿಕೆ ನೀಡಿದರು.
ದತ್ತ ಮಾಲೆ ಧರಿಸಿ ಬಿ ಎಸ್ ಯಡಿಯೂರಪ್ಪ ದತ್ತ ಪೀಠಕ್ಕೆ ಬರದಿದ್ದರೆ, ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ, ಅದೇ ರೀತಿ ಆಯಿತು. ಈಗ ಅರ್ಚಕರನ್ನು ನೇಮಕ ಮಾಡದಿದ್ದರೆ ನಿಮ್ಮನ್ನು ಹಿಂದೂ ಸಮಾಜ ಸಂಪೂರ್ಣವಾಗಿ ತಿರಸ್ಕಾರ ಮಾಡುತ್ತದೆ. ನಾನು ಎಚ್ಚರಿಕೆ ಕೊಡುವುದರ ಮೂಲಕ ಈ ಮಾತನ್ನು ಹೇಳುತ್ತಿದ್ದೇನೆ. ನಮಗೂ ಹೋರಾಟ ಮಾಡಿ ಸಾಕಾಗಿ ಹೋಗಿದೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ನಮಗೆ ಸಹಿಸೋಕೆ ಸಾಧ್ಯವಿಲ್ಲ. ಏಕೆ ಹಿಂದೂ ಧರ್ಮಕ್ಕೆ ಅನ್ಯಾಯ ಮಾಡುತ್ತಿದ್ದೀರಾ. ಕಾರ್ಯಕರ್ತರು ತುಂಬಾ ಆಕ್ರೋಶದಿಂದಿದ್ದಾರೆ, ಒಂದು ತೀರ್ಮಾನಕ್ಕೆ ಬರೆದಿದ್ದರೆ, ಏನು ಬೇಕಾದರೂ ಆಗಬಹುದು ಎಂದು ಸರಕಾರಕ್ಕೆ ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆಯ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಎಚ್ಚರಿಸಿದರು.












Click it and Unblock the Notifications