ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಾಂಗ್ಲಾದೇಶದ ನಾಲ್ವರು ಅಕ್ರಮ ನಿವಾಸಿಗಳು ಪತ್ತೆ
ಚಿಕ್ಕಮಗಳೂರು, ಜುಲೈ 23 : ರಾಜ್ಯದಲ್ಲಿ ಹಲವು ಕಡೆ ಅಕ್ರಮ ಬಾಂಗ್ಲಾ ನಿವಾಸಿಗಳು ಪತ್ತೆಯಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳೂರು, ರಾಮನಗರದಂತೆ ಕಾಫಿ ನಾಡು ಚಿಕ್ಕಮಗಳೂರಿನಲ್ಲೂ ಕೂಲಿ ಕೆಲಸಕ್ಕಾಗಿ ಬಂದಿದ್ದ ಅಕ್ರಮ ಬಾಂಗ್ಲಾದೇಶದ ನಿವಾಸಿಗಳು ಪೊಲೀಸರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನರಸಿಂಹರಾಜಪುರದ ಸಿಂಸೆ ಬೋವಿ ಕಾಲೋನಿಯಲ್ಲಿ ಒಂದೇ ಮನೆಯಲ್ಲಿ ನಾಲ್ಕು ಜನ ಬಾಂಗ್ಲಾ ದೇಶೀಯರು ವಾಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನರಸಿಂಹರಾಜಪುರ ಠಾಣಾ ವ್ಯಾಪ್ತಿಯಲ್ಲಿನ ಬಿಹೆಚ್ ಕೈಮರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಆಗ ಒಂದೇ ಮನೆಯಲ್ಲಿ ನಾಲ್ಕು ಜನ ವಾಸ ಮಾಡುತ್ತಿರುವುದು ಪತ್ತೆಯಾಗಿದ್ದು, ಅವರನ್ನು ವಿಚಾರಿಸಿದಾಗ ಕನ್ನಡ ಮಾತನಾಡಲು ಬರದೆ ಇದ್ದುದರಿಂದ ಬಾಂಗ್ಲಾ ಭಾಷೆ ಹಾಗೂ ಕನ್ನಡ ಭಾಷೆಯನ್ನು ಮಾತನಾಡಲು ಬರುವ ನೂರುಲ್ಲಾ ಇಸ್ಲಾಂನನ್ನು ಕರೆದು ಅವರ ಮೂಲಕ ವಿಚಾರಣೆ ನಡೆಸಿದ್ದಾರೆ.
ಅಕ್ರಮ ಬಾಂಗ್ಲಾ ನಿವಾಸಿಗಳಾದ ಎಂಡಿ ಖೈರುಲ್ ಇಸ್ಲಾಂ, ಎಂಡಿ ರುಹುಲ್, ಮೋಮಿನ್ ಆಲಿ ಹಾಗೂ ಸಲೀಂ ಎಂದು ತಿಳಿದುಬಂದಿದ್ದು ಇವರ ಜನ್ಮ ದಿನಾಂಕ ದೃಢೀಕರಣ ಪತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಖಲೆಗಳ ಆಧಾರದ ಮೇಲೆ ಇವರು ಬಾಂಗ್ಲಾದೇಶದ ನಿವಾಸಿಗಳೆಂದು ಖಚಿತವಾಗಿದೆ. ಇವರು ಪಶ್ಚಿಮ ಬಂಗಾಳದ ಮೂಲಕ ದೇಶದೊಳಗೆ ಅಕ್ರಮವಾಗಿ ನುಸುಳಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಈ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ದೇಶದೊಳಗೆ ನುಸುಳಿ ಕಾಫಿ ನಾಡಿನಲ್ಲಿ ಬೀಡು ಬಿಟ್ಟಿದ್ದಾರೆ. ಕಾಫಿನಾಡಿನಲ್ಲಿ ಗಾರೆ ಕೆಲಸ ಮಾಡುತ್ತಿರುವ ಇವರನ್ನು ನರಸಿಂಹರಾಜಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ವಿವಿಧ ಕಡೆ ಕೆಲಸ ಮಾಡುವ ಸುಮಾರು 500ಕ್ಕೂ ಹೆಚ್ಚು ಮಂದಿಯನ್ನು ಬಾಂಗ್ಲಾದೇಶದ ಅಕ್ರಮ ವಲಸಿಗರಾರಿಬಹುದೆಂಬ ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಅದಾದ ವಾರದಲ್ಲೇ ರಾಮನಗರದಲ್ಲಿ 8 ಮಂದಿಯನ್ನು ಬಂಧಿಸಲಾಗಿತ್ತು.

ಇನ್ನೂ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚುವ ಕಾರ್ಯ ದೇಶಾದ್ಯಂತ ಹಲವು ಕಡೆ ನಡೆಯುತ್ತಲೇ ಇದೆ. ಇತ್ತೀಚೆಗೆ ಗಡಿ ಭದ್ರತಾ ಪಡೆ ನೀಡಿದ ಮಾಹಿತಿ ಪ್ರಕಾರ 2019ರಿಂದ ಈವರೆಗೆ ಅಕ್ರಮವಾಗಿ ಭಾರತ ಪ್ರವೇಶ ಮಾಡಿದ್ದ ಸುಮಾರು 14 ಸಾವಿರ ಬಾಂಗ್ಲಾ ದೇಶೀಯರನ್ನು ವಾಪಸ್ ಬಾಂಗ್ಲಾ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ.












Click it and Unblock the Notifications