ಕಾಫಿನಾಡು ಪೊಲೀಸರ ಭರ್ಜರಿ ಕಾರ್ಯಾಚರಣೆ; ಕೋಟಿ ಮೌಲ್ಯದ ವಸ್ತುಗಳು ವಶ
ಚಿಕ್ಕಮಗಳೂರು, ನವೆಂಬರ್ 9: ಕಳೆದ ಒಂದು ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯ 20 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 77 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 82.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಮರಳಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದರು.
ಚಿಕ್ಕಮಗಳೂರು ನಗರದ ರಾಮನಹಳ್ಳಿಯ ಡಿಎಆರ್ ಮೈದಾನದಲ್ಲಿ ಮಂಗಳವಾರ ಪ್ರಾಪರ್ಟಿ ರಿಟರ್ನ್ ಪೆರೇಡ್ ಕಾರ್ಯಕ್ರಮದಲ್ಲಿ ವಾರಸುದಾರರಿಗೆ ವಿವಿಧ ವಸ್ತುಗಳನ್ನು ಹಸ್ತಾಂತರಿಸಿ ಮಾತನಾಡಿದರು.
41.27 ಲಕ್ಷ ಮೌಲ್ಯದ 900 ಗ್ರಾಂ ಚಿನ್ನ ಹಾಗೂ 12 ಕೆಜಿ ಬೆಳ್ಳಿಯ ಆಭರಣಗಳು, 21.54 ಲಕ್ಷ ಮೌಲ್ಯದ 45 ದ್ವಿಚಕ್ರ, ನಾಲ್ಕು ಚಕ್ರ ಹಾಗೂ ತ್ರಿಚಕ್ರ ವಾಹನಗಳು, 7.17 ಲಕ್ಷ ನಗದು, 3.30 ಲಕ್ಷ ಮೌಲ್ಯದ ಅಡಿಕೆ, 1.41 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ 7.82 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 82,53,511 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಮಾತು ಮುಂದುವರೆಸಿದ ಎಸ್ಪಿ ಎಂ.ಎಚ್. ಅಕ್ಷಯ್, ಕಳ್ಳತನಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಹಾಗೂ ಕಳ್ಳತವನ್ನು ತಡೆಗಟ್ಟಲು ಎಲ್ಲಾ ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ವಾರ್ಡ್ ಮೀಟಿಂಗ್ ಮಾಡಿ ನಾಗರಿಕರಿಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು ಮನವಿ ಮಾಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಎಲ್ಲಾ ದೇವಸ್ಥಾನಗಳಲ್ಲಿ ದೇವಾಲಯದ ಆಡಳಿತ ಮಂಡಳಿ ಜೊತೆ ಚರ್ಚಸಿ ಕ್ಯಾಮೆರಾ ಹಾಗೂ ಅಲರಾಂ ಅಳವಡಿಸಲಾಗುತ್ತಿದ್ದು, ಈಗಾಗಲೇ ಸಖರಾಯಪಟ್ಟಣ ಹಾಗೂ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯಗಳಲ್ಲಿ ಇದನ್ನು ಬಹುತೇಕ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ರಾತ್ರಿ ಪಾಳಿಯನ್ನು ಸಕ್ರಿಯಗೊಳಿಸಲಾಗಿದ್ದು, ರೆಸಿಡೆನಿಸ್ಸಿಯಲ್ ಏರಿಯಾದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಗೆ ಪ್ರಶಂಸೆ
ಕಳ್ಳತನವಾಗಿದ್ದ ವಸ್ತುಗಳನ್ನು ಅತ್ಯಂತ ಶೀಘ್ರದಲ್ಲಿ ಕಾರ್ಯಾಚರಣೆ ಮಾಡಿ ಹಿಂದಿರುಗಿಸಿದ ಪೊಲೀಸ್ ಇಲಾಖೆಗೆ ವಸ್ತುಗಳನ್ನು ಕಳೆದುಕೊಂಡಿದ್ದ ವಾರಸುದಾರರು ಪ್ರಶಂಸೆ ವ್ಯಕ್ತಪಡಿಸಿದರು. ಚಿನ್ನಾಭರಣ, ಬೆಳ್ಳಿ, ನಗದು, ವಾಹನಗಳು ಸೇರಿದಂತೆ ಕೃಷಿ ಉಪಕರಣಗಳನ್ನು ಕಳೆದುಕೊಂಡಿದ್ದ ಹಲವರು ಸ್ಥಳದಲ್ಲಿಯೇ ಅವರ ವಸ್ತುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ಹಸ್ತಾಂತರಿಸಿದ ಕೂಡಲೇ ಅವರ ಮುಖದಲ್ಲಿ ಮಂದಹಾಸ ಮೂಡುವ ಜೊತೆಗೆ ಇಲಾಖೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಯಾವ್ಯಾವ ಠಾಣೆಯಲ್ಲಿ ಎಷ್ಟು ಪ್ರಕರಣ
ಚಿಕ್ಕಮಗಳೂರು ಜಿಲ್ಲೆಯ 20 ಪೊಲೀಸ್ ಠಾಣಾಗಳ ವ್ಯಾಪ್ತಿಯಲ್ಲಿ ನಡೆದ 77 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಅವರವರ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
ಚಿಕ್ಕಮಗಳೂರು ನಗರ ಠಾಣೆಯ 16 ಪ್ರಕರಣ, ಬಸವನಹಳ್ಳಿ 2, ಚಿಕ್ಕಮಗಳೂರು ಗ್ರಾಮಾಂತರ 2, ಆಲ್ದೂರು 1, ಮಲ್ಲಂದೂರು 1, ಬಾಳೂರು 1, ಬಣಕಲ್ 1, ಮೂಡಿಗೆರೆ 2, ಗೋಣಿಬೀಡು 1, ಲಕ್ಕವಳ್ಳಿ 4, ಲಿಂಗದಹಳ್ಳಿ 4, ತರೀಕೆರೆ 6, ಕಡೂರು 7, ಪಂಚನಹಳ್ಳಿ 1, ಅಜ್ಜಂಪುರ 9, ಬೀರೂರು 9, ಯಗಟಿ 5, ಬಾಳೆಹೊನ್ನೂರು 2, ಎನ್.ಆರ್. ಪುರ 2, ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ 1 ಪ್ರಕರಣದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಹಸ್ತಾಂತರಿಸಲಾಯಿತು.