ಚಿಕ್ಕಮಗಳೂರು; ನಾನು ಕರಸೇವಕ, ನನ್ನನ್ನು ಬಂಧಿಸಿ ಸಿಟಿ ರವಿ ಪ್ರತಿಭಟನೆ
ಚಿಕ್ಕಮಗಳೂರು, ಜನವರಿ 04: ಕರ್ನಾಟಕ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಅಭಿಯಾನವನ್ನು ಆರಂಭಿಸಿದೆ. ಗುರುವಾರ 'ನಾನು ಕರಸೇವಕ, ನನ್ನನ್ನು ಬಂಧಿಸಿ' ಎಂದು ಘೋಷವಾಕ್ಯದಡಿ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ನಾಯಕರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಭಾಗಿಯಾಗಿದ್ದ, 31 ವರ್ಷದ ಹಳೆಯ ಪ್ರಕರಣಗಳನ್ನು ಕೆದಕಿ ಶ್ರೀಕಾಂತ್ ಪೂಜಾರಿ ಸೇರಿದಂತೆ ರಾಮ ಭಕ್ತರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

ಚಿಕ್ಕಮಗಳೂರಿನಲ್ಲಿ 'ನಾನು ಕರಸೇವಕ, ನನ್ನನ್ನು ಬಂಧಿಸಿ' ಎಂದು ಬಿಜೆಪಿ ಕಾರ್ಯಕರ್ತರು ಪಕ್ಷದ ನಾಯಕ ಸಿ. ಟಿ. ರವಿ ನೇತೃತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ನುಗ್ಗಲು ಬಿಜೆಪಿ ಕಾರ್ಯಕರ್ತರು ಪ್ರಯತ್ನ ನಡೆಸಿದರು.
ಸಿ. ಟಿ. ರವಿ ಪೊಲೀಸ್ ವಶಕ್ಕೆ; ಗುರುವಾರ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಸಿ. ಟಿ. ರವಿ, 'ನಾನೂ ಕರಸೇವಕ, ನನ್ನನ್ನು ಬಂಧಿಸಿ' ಎಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.
ಹುಬ್ಬಳ್ಳಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಸಿ. ಟಿ. ರವಿ ಮೌನ ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಕೃಷ್ಣಮೂರ್ತಿ ಪೊಲೀಸ್ ಠಾಣೆ ಒಳಗೆ ಸಿ. ಟಿ. ರವಿಯವರನ್ನು ಕರೆದುಕೊಂಡು ಹೋದರು. ಈ ವೇಳೆ ಕೆಂಡಾಮಂಡಲರಾದ ಬಿಜೆಪಿ ಕಾರ್ಯಕರ್ತರು, ನಾವು ಕರಸೇವಕರೇ ನಮ್ಮನ್ನು ಬಂಧಿಸಿ ಎಂದು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಕೆಲಕಾಲ ನಗರ ಪೊಲೀಸ್ ಠಾಣೆ ಎದುರು ಹೈಡ್ರಾಮವೇ ನಡೆಯಿತು. ನಂತರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಠಾಣೆ ಆವರಣದಿಂದ ಹೊರಗೆ ಕಳುಹಿಸಿದರು. ನಂತರ ಸಿ. ಟಿ. ರವಿ ಅವರನ್ನು ಬಿಡುಗಡೆ ಮಾಡಲಾಯತು.
ಪೊಲೀಸರು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಿ. ಟಿ. ರವಿ, "ನಿಮ್ಮ ಮೇಲೆ ಪ್ರಕರಣ ಇಲ್ಲ ಎಂದು ಬಿಡುಗಡೆ ಮಾಡಿದ್ದಾರೆ. ಶ್ರೀಕಾಂತ್ ಪೂಜಾರಿ ಬಿಡುಗಡೆ ಆಗುವ ತನಕ ಹೋರಾಟ ಮುಂದುವರೆಯುತ್ತದೆ. ನಾನು ಪ್ರತಿಭಟನೆ ಮಾಡಿದೆ ಎಂದು ವಶಕ್ಕೆ ಪಡೆದಿದ್ದರು" ಎಂದರು.
ಬೆಂಗಳೂರಲ್ಲೂ ಹೋರಾಟ; ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಕರ್ನಾಟಕ ಬಿಜೆಪಿ ಘಟಕ ಬೆಂಗಳೂರಿನಲ್ಲಿ ಬುಧವಾರ ಬೃಹತ್ ಹೋರಾಟ ನಡೆಸಿತ್ತು. ದೇಶದ ಜನರ 5 ದಶಕಗಳ ಕನಸು ನನಸಾಗುತ್ತಿರುವ ಪವಿತ್ರ ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಭಾಗಿಯಾಗಿದ್ದ, 31 ವರ್ಷದ ಹಳೆಯ ಪ್ರಕರಣಗಳನ್ನು ಕೆದಕಿ ಶ್ರೀಕಾಂತ್ ಪೂಜಾರಿ ಸೇರಿದಂತೆ ರಾಮ ಭಕ್ತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಲಾಗಿತ್ತು.
ಭವ್ಯ ಶ್ರೀರಾಮ ಮಂದಿರ ತಲೆಯೆತ್ತಿರುವುದನ್ನು ಸಹಿಸದೆ, ಓಲೈಕೆ ರಾಜಕಾರಣಕ್ಕೆ ಕಟ್ಟುಬಿದ್ದು ಹಿಂದೂ ಕಾರ್ಯಕರ್ತರು ಹಾಗೂ ರಾಮಭಕ್ತರನ್ನು ಜೈಲಿಗಟ್ಟುವ ಹುನ್ನಾರ ನಡೆಸಲು ರೂಪಿಸಿರುವ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವನ್ನು ಖಂಡಿಸಲಾಗಿತ್ತು. ತಕ್ಷಣ ಹಿಂದೂ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ ರಾಮವಿರೋಧಿ ನಿಲುವುಗಳನ್ನು ಕೈಬಿಡುವಂತೆ ಆಗ್ರಹಿಸಲಾಗಿತ್ತು.












Click it and Unblock the Notifications