ನಮ್ಮ ಸಾಧನೆ ನೋಡಿ ಅಂಕ ನೀಡಿ; ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಮನವಿ
ಚಿಕ್ಕಮಗಳೂರು, ಅಕ್ಟೋಬರ್, 20: ಮುಂದಿನ ಚುನಾವಣೆಯಲ್ಲಿ ತಮಗೆ ಮತ್ತು ಪಕ್ಷಕ್ಕೆ ಬೋನಸ್ ಕೊಡಬೇಡಿ. ಪಕ್ಷ ಮತ್ತು ನಮ್ಮ ಸಾಧನೆಯನ್ನು ನೋಡಿ ವಾಸ್ತವಿಕ ನೆಲೆಗಟ್ಟಿನಲ್ಲಿ ಅಂಕ ಕೊಡಿ ಎಂದು ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನಾವೆಲ್ಲಾ ಅನ್ನ ಮತ್ತು ಮಣ್ಣಿನ ಋಣವನ್ನು ತೀರಿಸಬೇಕು. ಆ ಋಣವನ್ನು ತೀರಿಸದಿದ್ದರೆ ನಮ್ಮ ಬದುಕಿಗೆ ಅರ್ಥ ಇರುವುದಿಲ್ಲ. ಋಣವನ್ನು ತೀರಿಸುವ ಕೆಲಸವನ್ನು ಮಾಡಿದ್ದೇವೆ. ಚುನಾವಣೆ ವೇಳೆ ನನಗೆ ಮತ್ತು ಪಕ್ಷಕ್ಕೆ ಬೋನಸ್ ಅಂಕ ಕೊಡಿ ಎಂದು ನಾನು ಕೇಳುವುದಿಲ್ಲ. ಮೌಲ್ಯಮಾಪನ ಮಾಡಬೇಕಾದರೆ ಕರೆಕ್ಟ್ ಆಗಿ ಮಾಡಿ ಎಂದಷ್ಟೇ ನಾನು ಕೇಳುವುದು. ಜಾತಿ ನೋಡಿ ಮೌಲ್ಯಮಾಪನವನ್ನು ಮಾಡಬೇಡಿ. ಅಥವಾ ಆಸೆ, ಆಮಿಷಕ್ಕೊಳಗಾಗದೆ ಸಾಧನೆ ವರದಿ ನೋಡಿ ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಎಂದರು.
ಇನ್ನು ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ಸ್ಥಳೀಯರಿಗೆ ಸ್ವಲ್ಪಮಟ್ಟಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಹೋದಲ್ಲಿ ಮುಂದೊಂದು ದಿನ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಸಂಘರ್ಷ ನಡೆಯುವ ಸಂಭವವಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ನೀತಿ ರೂಪಿಸುವ ಕುರಿತು ಜಿಲ್ಲಾಡಳಿತ ಗಮನಹರಿಸಬೇಕಿದೆ ಎಂದರು.

3 ಕೋಟಿ ಅನುದಾನಕ್ಕೆ ಪ್ರಸ್ತಾವನೆ
ಬೇರೆ ಜಿಲ್ಲೆಗಳ ಅಭಿವೃದ್ಧಿಯಲ್ಲಿ ನಾವು ಇನ್ನು ಹಿಂದೆ ಇದ್ದೇವೆ ಎನ್ನುವಂತಾಗಬಾರದು ಎಂಬ ದೃಷ್ಟಿಯಿಂದ ಜಿಲ್ಲೆಗೆ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಚಿಕ್ಕಮಗಳೂರು ಅಭಿವೃದ್ಧಿಗೆ ನಾವು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲಾ ಸರ್ಕಾರಿ ನೌಕರರ ಸಂಘ ನಗರದಲ್ಲಿ ನಿರ್ಮಿಸುತ್ತಿರುವ ನೌಕರರ ಸಮುದಾಯ ಭವನಕ್ಕೆ ಹೆಚ್ಚುವರಿ 3 ಕೋಟಿ ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸರ್ಕಾರಿ ನೌಕರರ ಓಪಿಎಸ್ ಮತ್ತು ಎನ್‍ಪಿಎಸ್ ಸ್ಕೀಂ ಬಗ್ಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.

6 ಕೋಟಿ ರೂ. ನಲ್ಲಿ ಭವನ ನಿರ್ಮಾಣ
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಸರ್ಕಾರಿ ನೌಕರರ ಭವನವನ್ನು ನಿರ್ಮಿಸುವ ಚಿಂತನೆ ಹಲವು ವರ್ಷಗಳಿಂದ ಇತ್ತು. 6 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸುವ ಮೂಲಕ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅದನ್ನು ನೆರವೇರಿಸಿದ್ದಾರೆ ಎಂದು ಶ್ಲಾಘಿಸಿದರು. ನಂತರ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ಶಾಸಕ ಸಿ.ಟಿ.ರವಿ ಅವರ ಸಹಕಾರದಿಂದಾಗಿ ನೌಕರರ ಭವನಕ್ಕೆ 1 ಕೋಟಿ ರೂಪಾಯಿ ಅನುದಾನ ದೊರೆತಿದೆ. ಇದರ ಜೊತೆಗೆ ಶಾಸಕರು ತಮ್ಮ ಅನುದಾನದಲ್ಲೂ 10ಲಕ್ಷ ರೂಪಾಯಿ ನೀಡಿದ್ದಾರೆ ಎಂದು ತಿಳಿಸಿದರು.

ಹಲವು ಕಾರ್ಯಕ್ರಮಗಳ ಉದ್ಘಾಟನೆ
ಇನ್ನು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಶಾಸಕ ಸಿ.ಟಿ.ರವಿ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ನೌಕರರ ಭವನ ಹಾಗೂ ರಿಯಾಯತಿ ದರದ ನೌಕರರ ಕ್ಯಾಂಟೀನ್ ಅನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದರು?
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ತಹಶೀಲ್ದಾರ್ ವಿನಾಯಕ ಸಾಗರ್, ಸಫಾಯಿ ಕರ್ಮಚಾರಿ, ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಬಿ.ಬಿ.ಕಾಂತರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಓಂಕಾರಸ್ವಾಮಿ, ಕಾರ್ಯದರ್ಶಿ ಸತ್ಯ ನಾರಾಯಣ, ಖಜಾಂಚಿ ಡಾ.ಜಗದೀಶ್, ರಾಜ್ಯ ಪರಿಷತ್ ಸದಸ್ಯ ಎಸ್.ಬಿ.ಪೂರ್ಣೇಶ್, ಈಶ್ವರಪ್ಪ, ಕೃಷ್ಣಕುಮಾರ್, ಸುರೇಶ್, ಯೋಗೀಶ್, ರಾಜೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications