Doctors Protest: ಚಿಕ್ಕಮಗಳೂರಲ್ಲಿ ವೈದ್ಯರ ಮೇಲೆ ಚಪ್ಪಲಿ ಎಸೆತ: ಒಪಿಡಿ ಬಂದ್ ಮಾಡಿದ ವೈದ್ಯರು!
ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದು, ಎಳೆದಾಡಿದ್ದು ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲಸದಲ್ಲಿದ್ದ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬರು ಮೊದಲು ಚಪ್ಪಲಿ ಎಸೆದಿದ್ದಾರೆ. ಇದಾದ ಬೆನ್ನಲ್ಲೇ ಮಹಿಳೆಯೊಂದಿಗಿನ ಗುಂಪೊಂದು ವೈದ್ಯರನ್ನು ಕರ್ತವ್ಯ ನಿರ್ವಹಿಸಲು ಬಿಡದೆ ಎಳೆದಾಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. ಮಹಿಳೆ ಹಾಗೂ ಗುಂಪಿನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಒಪಿಡಿ (ಹೊರ ರೋಗಿಗಳ ವಿಭಾಗ) ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಮಗಳೂರಿನ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಇರ್ಷಾದ್ ಎನ್ನುವ ವ್ಯಕ್ತಿ ಬಂದಿದ್ದರು. ಗಲಾಟೆಯೊಂದರಲ್ಲಿ ಗಾಯಗೊಂಡಿ ಚಿಕಿತ್ಸೆಗೆ ಪಡೆದುಕೊಳ್ಳುವುದಕ್ಕೆ ಅವರು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಆ ವೇಳೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯ ವೆಂಕಟೇಶ್ (ಮೂಳೆ ತಜ್ಞ) ಅವರು ತಪಾಸಣೆ ನಡೆಸುತ್ತಿದ್ದರು. ಆದರೆ, ಏಕಾಏಕಿ ಇರ್ಷಾದ್ ಅವರ ಸಂಬಂಧಿಕರು ಕೋಣೆಯ ಒಳಗೆ ಪ್ರವೇಶಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವೈದ್ಯರು. ಸ್ವಲ್ಪ ಆಚೆ ಹೋಗಿ ಅವರಿಗೆ ಚಿಕಿತ್ಸೆ ಕೊಡ್ತಾ ಇದ್ದೀನಿ ಎಂದಿದ್ದಾರೆ. ಈ ವೇಳೆ ವೈದ್ಯರು ಹಾಗೂ ರೋಗಿಯ ಸಂಬಂಧಿಕರ ನಡುವೆ ಮಾತಿಗೆ ಮಾತು ಬೆಳೆದು ಅದು ಗಲಾಟೆ ರೂಪಕ್ಕೆ ತಿರುಗಿದೆ.

ಈ ವೇಳೆ ವೈದರ ಮೇಲೆ ಕೋಪಗೊಂಡ ತಸ್ಲಿಮಾ ಎನ್ನುವ ಗಾಯಾಳುವಿನ ಸಂಬಂಧ ಏಕಾಏಕಿ ವೈದ್ಯರ ಕೊರಳುಪಟ್ಟಿ ಹಿಡಿದುಕೊಂಡು ಎಳೆದಾಡಿದ್ದಾಳೆ. ಅಲ್ಲದೇ ಕಾಲಿನಿಂದ ಚಪ್ಪಲಿಯನ್ನು ತೆಗೆದು ವೈದ್ಯರ ಮೇಲೆ ಎಸೆದಿದ್ದಾಳೆ. ಇದಕ್ಕೆ ವೈದರು ಹಾಗೂ ಸಹಾಯಕ ಸಿಬ್ಬಂದಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಜಿಲ್ಲಾಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಸಹಾಯಕ ಸಿಬ್ಬಂದಿ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ, ಡಾಕ್ಟರ್ ವೆಂಕಟೇಶ್ ಅವರ ಮೇಲೆ ಹಲ್ಲೆಯಾದ ಅಮಾನವೀಯ ಘಟನೆ ನಡೆದಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) September 10, 2024
ಸನ್ಮಾನ್ಯ ಗೃಹ ಸಚಿವರಾದ @DrParameshwara ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ. @DgpKarnataka ಅಲೋಕ್ ಮೋಹನ್ ಅವರೇ ತಾವು ಈ… pic.twitter.com/O1vv77L6wR
ಸಿ.ಟಿ ರವಿ ಟ್ವೀಟ್: ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಆಗ್ರಹ
ಇನ್ನು ಈ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ, ಡಾಕ್ಟರ್ ವೆಂಕಟೇಶ್ ಅವರ ಮೇಲೆ ಹಲ್ಲೆಯಾದ ಅಮಾನವೀಯ ಘಟನೆ ನಡೆದಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರೇ ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ. ಡಿಜಿಪಿ ಅಲೋಕ್ ಮೋಹನ್ ಅವರೇ ತಾವು ಈ ಕೂಡಲೇ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications