Chikkamagaluru: ಹೊಸ ವರ್ಷದ ಸಂಭ್ರಮ ಈ ಪ್ರವಾಸಿ ತಾಣಗಳಿಗೆ ಭೇಟಿ ನಿರ್ಬಂಧ
ಚಿಕ್ಕಮಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆಗೆ ಕಾಫಿನಾಡು ಚಿಕ್ಕಮಗಳೂರು ತಯಾರಾಗಿದೆ. ಜಿಲ್ಲೆಯ ಶೇ 90ರಷ್ಟು ರೆಸಾರ್ಟ್, ಹೋಂ ಸ್ಟೇಗಳು ಭರ್ತಿಯಾಗಿದ್ದು, ಪ್ರವಾಸಿಗರು ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಕೆಲವು ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ಇವರು ಆದೇಶವೊಂದನ್ನು ಹೊರಡಿಸಿದ್ದಾರೆ. 2025ನೇ ಸಾಲಿನ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯ ತನಕ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ಆದೇಶ 2025ನೇ ಸಾಲಿನ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪುವಾಸಿ ತಾಣಗಳಿಗೆ ಪ್ರವಾಸಿಗರು ದಿನಾಂಕ 31/12/2024 ಸಂಜೆ 6 ಗಂಟೆಯಿಂದ ದಿನಾಂಕ 01/01/2025 ರಂದು ಬೆಳಗ್ಗೆ 6 ಗಂಟೆಯವರೆಗೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಯಾವ-ಯಾವ ಪ್ರವಾಸಿ ತಾಣಗಳು?: ಈ ವಿಷಯಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 2025ನೇ ಸಾಲಿನ ಹೊಸ ವರ್ಷ ಆಚರಣೆ ಸಂಬಂಧ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈಗಾಗಲೇ ಆನ್‌ಲೈನ್ ಮುಖಾಂತರ ನಿಷೇಧಿಸುವ ಸ್ಥಳಗಳ ಮಾರ್ಗದಲ್ಲಿ ಇರುವ ಹೋಂ ಸ್ಟೇ, ರೇಸಾರ್ಟ್‌ಗಳಲ್ಲಿ ಕಾಯ್ದಿರಿಸಿದ ಪ್ರವಾಸಿಗರಿಗೆ ಸಂಬಂಧಪಟ್ಟ ಹೋಂ ಸ್ಟೇ ಮತ್ತು ರೇಸಾರ್ಟ್‌ಗೆ ಹೋಗಲು ಹೊರತುಪಡಿಸಿ ಇತರೆ ಪ್ರವಾಸಿಗರನ್ನು ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಜಾವರಿನ್ ಚೆಕ್ ಪೋಸ್ಟ್‌ನಿಂದ ಮೇಲ್ಬಾಗಕ್ಕೆ ಹೋಗುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ, ಹಾಗೂ ಹಿರೇಕೊಳಲೆ ಕೆರೆ ತಾಣಗಳಿಗೆ ಭೇಟಿ ನೀಡುವಂತಿಲ್ಲ.
ಮೂಡಿಗೆರೆ ತಾಲೂಕು ವ್ಯಾಪ್ತಿಯ ಎತ್ತಿನ ಭುಜ, ದೇವರಮನೆ, ರಾಣಿ ಝರಿ ಬಲ್ಲಾಳರಾಯದ ದುರ್ಗ, ಬಂಡಾಜೆ ಫಾಲ್ಸ್, ಕುಡಿಗೆ ಫಾಲ್ಸ್ ಮತ್ತು ಕಳಸ ತಾಲೂಕು ವ್ಯಾಪ್ತಿಯ ಕ್ಯಾತನಮುಕ್ಕಿ, ರುದ್ರಪಾದ, ತೂಗು ಸೇತುವೆ ಮತ್ತು ಅಬ್ಬುಗುಡಿಗೆ ಫಾಲ್ಸ್. ಕಡೂರು ತಾಲೂಕು ವ್ಯಾಪ್ತಿಯ ಆಯ್ಯನಕೆರೆ, ಮದಗದ ಕೆರೆ. ತರೀಕೆರೆ ತಾಲೂಕು ವ್ಯಾಪ್ತಿಯ ಕೆಮ್ಮಣ್ಣಗುಂಡಿ, ಕಲ್ಲತ್ತಿಗಿರಿ, ಹೆಬ್ಬೆ ಫಾಲ್ಸ್ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.
ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಇವರ ಪುಸ್ತಾವನೆ ಪರಿಗಣಿಸಿ, ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.
ಆದರೆ ವಿಶೇಷ ಸೂಚನೆಯೊಂದನ್ನು ಸಹ ಜಿಲ್ಲಾಡಳಿತ ನೀಡಿದೆ. ಈ ಆದೇಶವು ಈಗಾಗಲೇ ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳಿಗೆ, ಇತರೆ ವ್ಯವಸ್ಥೆಗಳ ಮುಂಖಾತರ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿರುವ ಪ್ರವಾಸಿಗರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications