KSRTC: ಕೆಎಸ್ಆರ್‌ಟಿಸಿ ಡಿಸಿಗೆ ಚಾಕುವಿನಿಂದ ಇರಿಯಲು ಯತ್ನ!
ಚಿಕ್ಕಮಗಳೂರು ಸೆಪ್ಟೆಂಬರ್ 13: ಕೆಎಸ್ಆರ್‌ಟಿಸಿ ಡಿಸಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸಿಬ್ಬಂದಿಯಿಂದಲೇ ಚಾಕುವಿನಿಂದ ದಾಳಿ ನಡೆದಿದ್ದು ಸ್ವಲ್ಪದರಲ್ಲೇ ಕೆಎಸ್ಆರ್‌ಟಿಸಿ ಡಿಸಿ ಪಾರಾಗಿದ್ದಾರೆ. ಅಷ್ಟಕ್ಕೂ ಹಲ್ಲೆಗೆ ಕಾರಣ ಏನು? ಹಲ್ಲೆಯಾಗಿದ್ದು ಎಲ್ಲಿ ಅನ್ನೋದಾದರೆ...

ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣದ ಒಳಗೆ ಈ ಘಟನೆ ನಡೆದಿದೆ. ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಎಂಬುವವರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಡಿಸಿ ಜಗದೀಶ್ ಕುಮಾರ್ ಈ ಹಿಂದೆ ರಿತೇಶ್ ಹಾಜರಾತಿ ಸರಿಯಿಲ್ಲ ಎಂದು ಕುಟುಂಬವನ್ನ ಕರೆಸಿ ಕೌನ್ಸಿಲಿಂಗ್ ಮಾಡಿದ್ದರು. ಕುಟುಂಬದವರ ಮನವಿ ಮೇರೆಗೆ ರಿತೇಶ್‌ನನ್ನು ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದು ರಿತೇಶ್್ಗೆ ಇಷ್ಟವಾಗಿರಲಿಲ್ಲ. ಇದರಿಂದ ಡಿಸಿ ಮೇಲೆ ರಿತೇಶ್ ಕೋಪಗೊಂಡಿದ್ದನು ಎನ್ನಲಾಗಿದೆ.

ಇದೇ ಕಾರಣಕ್ಕೆ ಗುರುವಾರ (ಸೆಪ್ಟೆಂಬರ್ 12) ಏಕಾಏಕಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡ ರಿತೇಶ್ ಡಿಸಿ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ವಾಹನ ಹತ್ತವ ವೇಳೆ ಅಡ್ಡಗಟ್ಟಿದ ರಿತೇಶ್ ಏಕಾಏಕಿ ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾನೆ.
ಡಿಸಿ ಕೈ ಅಡ್ಡ ಕೊಟ್ಟಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಅದಾಗ್ಯೂ ಕೆಎಸ್ಆರ್‌ಟಿಸಿ ಡಿಸಿಯ ಎಡಗೈನ ಎರಡು ಬೆರಳುಗಳಿಗೆ ಗಾಯವಾಗಿದೆ. ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಆರೋಪಿ ರಿತೇಶ್ ನಾಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ದಾಖಲಾಗಿದೆ.
ಚಿಕ್ಕಮಗಳೂರು: ಮಾಜಿ ಕಾಂಗ್ರೆಸ್ ಸಚಿವರಿಗೆ ಕಂದಾಯ ಇಲಾಖೆ ಶಾಕ್
ಒತ್ತುವರಿ ಭೂಮಿ ತೆರವು ಮಾಡಲು ಕಂದಾಯ ಇಲಾಖೆ ಮಾಜಿ ಕಾಂಗ್ರೆಸ್ ಸಚಿವರಿಗೆ ನೋಟೀಸ್ ಜಾರಿ ಮಾಡಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮಾಜಿ ಸಚಿವ ಸಗೀರ್ ಅಹಮದ್ ಮನೆಯ ಗೋಡೆಗೆ ನೋಟೀಸ್ ಅಂಟಿಸಿದ್ದಾರೆ.
ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ಅತ್ತಿಗುಂಡಿ ಗ್ರಾಮದಲ್ಲಿರುವ 31 ಎಕರೆ ಕಂದಾಯ ಭೂಮಿ ಒತ್ತುವರಿ ಮಾಡಿ, ಕಾಫಿ ತೋಟವಾಗಿ ಪರಿವರ್ತನೆ ಮಾಡಿರುವ ಆರೋಪ ಸಗೀರ್ ಅಹಮದ್ ಅವರ ಮೇಲಿದೆ. ಕಾಫಿ ತೋಟ ಮಾಡಿ ಫಾರಂ 57 ಅರ್ಜಿ ಹಾಕಿರುವ ಆರೋಪ ಅವರ ವಿರುದ್ಧ ಕೇಳಿ ಬಂದಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಕೋರ್ಟ್ ನಲ್ಲಿ ಸುದೀರ್ಘ ವಿಚಾರಣೆ ಬಳಿಕ ಭೂಮಿ ವಶಕ್ಕೆ ಆದೇಶ ನೀಡಲಾಗಿದ್ದು, ಒತ್ತುವರಿ ತೆರವು ಮಾಡಲು ಸಹಕಾರ ನೀಡುವಂತೆ ಕಂದಾಯ ಇಲಾಖೆ ಮನವಿ ಮಾಡಿದೆ. ಇದರಿಂದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸಗೀರ್ ಅಹಮದ್ ಮನೆಯ ಗೋಡೆಗೆ ನೋಟೀಸ್ ಅಂಟಿಸಿದ್ದಾರೆ.












Click it and Unblock the Notifications