ಮಹತ್ವದ ಅಪ್‌ಡೇಟ್: ಚಿಕ್ಕಮಗಳೂರು-ಹಾದಿಹಳ್ಳಿ ನಡುವೆ ರೈಲು ಸಂಚಾರ ಯಶಸ್ವಿ
ಚಿಕ್ಕಮಗಳೂರು, ಮಾರ್ಚ್ 30: ಚಿಕ್ಕಮಗಳೂರು-ಬೇಲೂರು-ಹಾಸನ ರೈಲು ಮಾರ್ಗದ ಕುರಿತು ಮಹತ್ವದ ಅಪ್‌ಡೇಟ್ ಸಿಕ್ಕಿದೆ. ಚಿಕ್ಕಮಗಳೂರು-ಹಾದಿಹಳ್ಳಿ ನಡುವೆ 10 ಕಿ. ಮೀ. ಮಾರ್ಗದಲ್ಲಿ ರೈಲಿನ ಪ್ರಾಯೋಗಿಕ ಮತ್ತು ವೇಗದ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಲೆನಾಡಿನ ಜನರ ಬಹುದಿನದ ಬೇಡಿಕೆ ಈಡೇರಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಶೇ 50ರ ವೆಚ್ಚ ಹಂಚಿಕೆ ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಕೈಗೊಂಡಿವೆ. ನೈಋತ್ಯ ರೈಲ್ವೆ ವಿಭಾಗದ ಮೈಸೂರು ವಲಯಕ್ಕೆ ಈ ಮಾರ್ಗ ಸೇರುತ್ತದೆ.
ನೈಋತ್ಯ ರೈಲ್ವೆ ವಿಭಾಗದ ಮೈಸೂರು ವಲಯ ಕಛೇರಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದೆ. ಚಿಕ್ಕಮಗಳೂರು-ಹಾದಿಹಳ್ಳಿ ನಡುವೆ ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ಮತ್ತು ವೇಗದ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಮಾರ್ಗ ಚಿಕ್ಕಮಗಳೂರು-ಬೇಲೂರು ಹೊಸ ಬ್ರಾಡ್ ಗೇಜ್ ರೈಲು ಮಾರ್ಗದಲ್ಲಿ ಬರುತ್ತದೆ. ಪ್ರಾದೇಶಿಕ ಸಾರಿಗೆ ಸಂಪರ್ಕಕ್ಕೆ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಿದೆ.

ಚಿಕ್ಕಮಗಳೂರು-ಬೇಲೂರು-ಹಾಸನ ರೈಲು ಮಾರ್ಗದ ಕಾಮಗಾರಿಯನ್ನು ಪ್ಯಾಕೇಜ್‌ಗಳಾಗಿ ಮಾಡಿಕೊಂಡು ಕೈಗೊಳ್ಳಲಾಗಿದೆ. ಈಗ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಚಿಕ್ಕಮಗಳೂರು-ಹಾದಿಹಳ್ಳಿ ನಡುವೆ 10 ಕಿ. ಮೀ. ರೈಲು ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಗುವುದು ಬಾಕಿ ಇದೆ.
ಯೋಜನೆಯ ವಿವರಗಳು: ಮಾರ್ಚ್ 29ರಂದು ಚಿಕ್ಕಮಗಳೂರು-ಹಾದಿಹಳ್ಳಿ ನಡುವಿನ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಗೆ ದಿನಾಂಕ ನಿಗದಿಯಾಗಿತ್ತು. ಈ 10 ಕಿ. ಮೀ. ಮಾರ್ಗದಲ್ಲಿ ಅಧಿಕಾರಿಗಳು ಪರಿಶೀಲನೆ ಪೂರ್ಣಗೊಳಿಸಿದ್ದು, ರೈಲಿನ ವೇಗದ ಸಂಚಾರದ ಪರೀಕ್ಷೆಯನ್ನು ವೀಕ್ಷಣೆ ಮಾಡಿದರು. ಸ್ಥಳೀಯ ಅಧಿಕಾರಿಗಳಿಂದ ಕಾಮಗಾರಿಗಳ ಕುರಿತು ಮಾಹಿತಿಯನ್ನು ಸಹ ಪಡೆದರು.
ಮೈಸೂರು ವಲಯ ಕಛೇರಿ ಅಧಿಕಾರಿಗಳು ಸೇರಿದಂತೆ ತಂತ್ರಜ್ಞರನ್ನು ಒಳಗೊಂಡ ವಿಶೇಷ ಪರೀಕ್ಷಾರ್ಥ ರೈಲು ಚಿಕ್ಕಮಗಳೂರು ರೈಲು ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಟು, 9.30ಕ್ಕೆ ಹಾದಿಹಳ್ಳಿ ರೈಲು ನಿಲ್ದಾಣ ತಲುಪಿತು. ಹಲವು ಸುತ್ತುಗಳ ಕಾಲ ತಂತ್ರಜ್ಞರು ಬಳಿಕ ರೈಲು ಸಂಚಾರದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದರು. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿಕ್ಕಮಗಳೂರು-ಬೇಲೂರು-ಹಾಸನ ನಡುವಿನ 49 ಕಿ. ಮೀ. ರೈಲು ಮಾರ್ಗದ ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಭಾಗಿಸಲಾಗಿದೆ. ಚಿಕ್ಕಮಗಳೂರು-ಬೇಲೂರು ನಡುವಿನ 22 ಕಿ. ಮೀ. ಕಾಮಗಾರಿಯನ್ನು 2 ಪ್ಯಾಕೇಜ್‌ಗಳಾಗಿ ವಿಭಾಗ ಮಾಡಲಾಗಿದೆ. ಇದರಲ್ಲಿ ಭೂ ಸ್ವಾಧೀನ ಪೂರ್ಣಗೊಂಡ ಚಿಕ್ಕಮಗಳೂರು-ಹಾದಿಹಳ್ಳಿ ನಡುವಿನ 10 ಕಿ. ಮೀ. ಮಾರ್ಗದ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಸಂಚಾರ ನಡೆದಿದೆ.
ಚಿಕ್ಕಮಗಳೂರು-ಹಾದಿಹಳ್ಳಿ ನಡುವಿನ 10 ಕಿ. ಮೀ. ಮಾರ್ಗವನ್ನು 133.75 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. 13 ಕಿ. ಮೀ. ಕಾಮಗಾರಿ ಇನ್ನೂ ಬಾಕಿ ಇದ್ದು, 2026ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. 2027ರೊಳಗೆ ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗದ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಚಿಕ್ಕಮಗಳೂರು-ಬೇಲೂರು-ಹಾಸನ ರೈಲು ಮಾರ್ಗ ಪೂರ್ಣವಾದರೆ ಮಲೆನಾಡು ಭಾಗದ ಜನರು ಸುಲಭವಾಗಿ ಬೆಂಗಳೂರು, ಮೈಸೂರು ನಗರಕ್ಕೆ ಸಂಪರ್ಕ ಪಡೆಯಲಿದ್ದಾರೆ. ಈಗ ಚಿಕ್ಕಮಗಳೂರು ಜನಗರ ಜನರು ಕಡೂರಿಗೆ ಹೋಗಿ ಅಲ್ಲಿಂದ ಮೈಸೂರು ಅಥವ ಬೆಂಗಳೂರಿಗೆ ರೈಲಿನಲ್ಲಿ ಸಂಚಾರವನ್ನು ನಡೆಸಬೇಕಿದೆ. ಚಿಕ್ಕಮಗಳೂರು-ಬೆಂಗಳೂರು, ಚಿಕ್ಕಮಗಳೂರು-ಹಾಸನ ನಡುವೆ ಮೆಮು ರೈಲುಗಳ ಸಂಚಾರಕ್ಕೂ ರೈಲು ಮಾರ್ಗ ಅನುಕೂಲವಾಗಲಿದೆ.












Click it and Unblock the Notifications