Chaitra Kundapura fraud case: ಗೋವಿಂದ ಬಾಬು ಪೂಜಾರಿ ವಿರುದ್ದ ಗಗನ್ ಕಡೂರು ದೂರು
ಚಿಕ್ಕಮಗಳೂರು, ಸೆಪ್ಟೆಂಬರ್, 18: ಗೋವಿಂದ ಬಾಬು ಪೂಜಾರಿ ವಿರುದ್ಧ ಪೊಲೀಸ್ ಠಾಣೆಗೆ ಬಿಜೆಪಿ ಯುವ ಮುಖಂಡ, ಬಿಜೆಪಿ ಟಿಕೆಟ್ ಕೇಸ್‌ನ ಬಂಧಿತ ಆರೋಪಿ ಗಗನ್ ಕಡೂರು ಪೊಲೀಸ್ ಠಾಣೆಗೆ ಪತ್ರ ರವಾನಿಸುವ ಮೂಲಕ ದೂರು ನೀಡಿದ್ದಾರೆ.
ಕೆಲ ವರ್ಷಗಳಿಂದ ನನಗೆ ಪೂಜಾರಿ ಅವರ ಪರಿಚಯವಾಗಿದೆ. ನಾನು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದೆ. ಆಗ ಗೋವಿಂದ ಬಾಬು ಪೂಜಾರಿಯಿಂದ ಮದುವೆ ಸಹಾಯಕ್ಕಾಗಿ 50 ಸಾವಿರ ರೂಪಾಯಿ ಹಣವನ್ನು ಸಾಲ ಪಡೆದಿದ್ದೆ. ಸಕಾಲಕ್ಕೆ ಅವರಿಗೆ ಮರು ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ನನಗೆ ಹಾಗೂ ನನ್ನ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ನನ್ನ ಬಳಿ ಆಡಿಯೋ ರೆಕಾರ್ಡ್ ಇದೆ. ನಮಗೆ ರಕ್ಷಣೆ ನೀಡಿ. ಗೋವಿಂದ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಈ ಪತ್ರ ಸದ್ಯ ಸಾಮಾಜಿಕ ಜಾಲಜಾಣದಲ್ಲಿ ವೈರಲ್ ಆಗಿದೆ.
ಸಿ.ಟಿ.ರವಿ ಹೇಳಿದ್ದೇನು
ಹಣವೇ ಬಿಜೆಪಿಯಲ್ಲಿ ಪ್ರಧಾನವಲ್ಲ. ಹಾಗೊಂದು ವೇಳೆ ಆಗಿದ್ದಲ್ಲಿ ಬೈಂದೂರಿನಲ್ಲಿ ಟಿಕೆಟ್ ಬಡ ಕಾರ್ಯಕರ್ತನಿಗೆ ಸಿಗುತ್ತಿರಲಿಲ್ಲ. ಸುಳ್ಯದಲ್ಲಿ ಬಡ ಮಹಿಳೆ ಭಾಗೀರಥಿ ಮುರುಳ್ಯ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹರು ಮಂತ್ರಿಗಳು ಆಗುತ್ತಿರಲಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬೈಂದೂರು ಟಿಕೆಟ್ಗಾಗಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣದ ವಿಚಾರದ ಬಗ್ಗೆ ಮಾತನಾಡಿದ ಅವರು, ಇಲ್ಲಿ ಗೋವಿಂದ ಬಾಬು ಪೂಜಾರಿಯನ್ನು ಮೋಸ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ಧಿವಂತರ ಜಿಲ್ಲೆಯ ಇವರೇ ಮೋಸ ಹೋಗಿದ್ದಾರೆ. ಅವರು ನೇರವಾಗಿ ಯಾರಿಗೆ ಫೋನ್ ಮಾಡಿದ್ದರೂ ಬಿಜೆಪಿ ನಾಯಕರು ಫೋನ್‌ಗೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರೊಂದಿಗೆ ತುಳುವಲ್ಲೇ ಮಾತನಾಡುತ್ತಿದ್ದರು. ನಳಿನ್, ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ನೇರವಾಗಿ ಫೋನ್ ಮಾಡಿ ಮಾತನಾಡುವ ಅವಕಾಶ ಗೋವಿಂದ ಬಾಬು ಪೂಜಾರಿಗಿತ್ತು ಎಂದರು.
ಈ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಬಹಿರಂಗವಾಗಬೇಕು. ಪ್ರಕರಣದ ಹಿಂದೆ ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕಾನೂನು ಕ್ರಮವಾಗಲಿ. ಯಾರದ್ದೋ ಹೆಸರು ಕೇಳಿ ಬರುತ್ತಿದೆ ಎನ್ನುವುದು ಬೇರೆ. ಈ ಪ್ರಕರಣ ಮೋಸ ಹೋದವರಿಗೂ ಪಾಠವಾಗಲಿ ಎಂದು ಸಿ.ಟಿ ರವಿ ಹೇಳಿದರು.
ಬಿಜೆಪಿ ಟಿಕೆಟ್ ಹಗರಣ: ಚೈತ್ರಾ ಕುಂದಾಪುರ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು- ಕಾಂಗ್ರೆಸ್ ಹೇಳಿದ್ದೇನು?
ಕಾಂಗ್ರೆಸ್ ಬಂದಾಗ ಬರ ಬರುತ್ತದೆ
ಇನ್ನು ಕಾಕತಾಳೀಯವೋ, ಕಾಲ್ಗುಣವೋ ಗೊತ್ತಿಲ್ಲ, ಕಾಂಗ್ರೆಸ್ ಬಂದಾಗ ಬರ ಬರುತ್ತದೆ. ಇದು ಕಾಕತಾಳೀಯವೆಂದು ಹೇಳಲ್ಲ. ಕಾಂಗ್ರೆಸ್ ಕಾಲ್ಗುಣವೂ ಹೌದು. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಾಗ ಬರ ಪರಿಸ್ಥಿತಿ ಬಂದಿದೆ ಎಂದು ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂದೆನಿಸುತ್ತಿದೆ. ಬಿ.ಕೆ.ಹರಿಪ್ರಸಾದ್ ಹೂಬ್ಲೋಟ್ ವಾಚ್, ಪಂಚೆಯೊಳಗಿನ ಖಾಕಿ ಚೆಡ್ಡಿ ಎಂದೆಲ್ಲಾ ಸಿದ್ದರಾಮಯ್ಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯ ಎಐಸಿಸಿ ಅವರಿಗೆ ನೋಟೀಸ್ ಕೂಡ ಕೊಟ್ಟಿದೆ. ಇದರ ಹಿಂದೆ ಡಿ.ಕೆ.ಶಿವಕುಮಾರ್ ಯೋಜನೆಯಿದೆ ಎಂದು ಹೇಳಲಾಗ್ತಿದೆ. ಈ ಮಧ್ಯೆ ರಾಜಣ್ಣ ಮೂರು ಜನ ಡಿಸಿಎಂ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ಹಿಂದೆ ಸಿಎಂ ಸಿದ್ದರಾಮಯ್ಯ ಯೋಜನೆ ಇದೆ ಎನ್ನಲಾಗುತ್ತಿದೆ ಎಂದರು.












Click it and Unblock the Notifications