Swaroop Revanna: ಭವಾನಿ ರೇವಣ್ಣ ಕಾಲಿಗೆ ಬಿದ್ದ ಸ್ವರೂಪ್: ಬಿಜೆಪಿ ಸೋಲಿಸಲು ಒಂದಾದ ದೇವೇಗೌಡರ ಕುಟುಂಬ
ಹಾಸನ, ಏಪ್ರಿಲ್ 20: ಹಾಸನ ಜೆಡಿಎಸ್ ಟಿಕೆಟ್ ಭವಾನಿ ರೇವಣ್ಣ ಕೈ ತಪ್ಪಿ ಸ್ವರೂಪ್ ಸಿಕ್ಕಿದೆ. ಹಾಸನ ಟಿಕೆಟ್‌ಗಾಗಿ ಭವಾನಿ ರೇವಣ್ಣ ಶತ ಪ್ರಯತ್ನ ನಡೆಸಿದರೂ ಕೂಡ ಹಲವು ಜಟಾಪಟಿಗಳ ಬಳಿಕ ಜೆಡಿಎಸ್ ಸ್ವರೂಪ್ ಸ್ಪರ್ಧಿಸಲು ಅವಕಾಶ ನೀಡಿದೆ. ಆದರೆ ಟಿಕೆಟ್ ಘೋಷಣೆ ಬಳಿಕ ಹಾಸನದ ಜೆಡಿಎಸ್ ಪಕ್ಷದ ಚಿತ್ರಣ ಬದಲಾಗಿದೆ.
ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸೋಲುಣಿಸಲು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬ ಒಂದಾಗಿದ್ದು, ಸ್ವರೂಪ್ ಗೆಲುವುವಿಗಾಗಿ ಈಗಾಗಲೇ ಹಾಸನದಲ್ಲಿ ಭರ್ಜರಿ ಪ್ರಚಾರ ಕಾರ್ಯ ಆರಂಭವಾಗಿದೆ. ಹಾಸನ ಜೆಡಿಎಸ್ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಕೂಡ ಸ್ವರೂಪ್ ಗೆಲುವಿಗಾಗಿ ಅಖಾಡಕ್ಕೆ ಇಳಿದಿದ್ದು, ಸ್ವರೂಪ್ ಪರ ಮತಯಾಚನೆ ಮಾಡಿದ್ದಾರೆ.

ಹಾಸನ ಜೆಡಿಎಸ್ ಚುನಾವಣಾ ಪ್ರಚಾರದ ವೇಳೆ ಭವಾನಿ ರೇವಣ್ಣ ಸ್ವರೂಪ್ ನನ್ನ ಹಾಡಿ ಹೊಗಳಿದ್ದಾರೆ. ಸ್ವರೂಪ್ ನನ್ನ ಮಗನಿದ್ದಂತೆ, ನಾನು ಸ್ವರೂಪ್‌ನನ್ನ ಮಗನಾಗಿಯೇ ನೋಡಿದ್ದೇನೆ. ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ, ಈ ಕ್ಷೇತ್ರದಲ್ಲಿ ಸ್ವರೂಪ್ ಗೆದ್ದೇ ಗೆಲ್ತಾನೆ ಎಂದು ಭವಾನಿ ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕುಟುಂಬ ಭಾಗಿಯಾಗಿ, ಸ್ವರೂಪ್ ಗೆಲ್ಲಿಸುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಮನವಿ ಮಾಡಿದರು. ಈ ವೇಳೆ ಸ್ವರೂಪ್ ಅವರು, ರೇವಣ್ಣ ಹಾಗೂ ಭವಾನಿ ರೇವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಭವಾನಿ ರೇವಣ್ಣ ಅವರು, ನನಗೆ ಟಿಕೆಟ್ ಸಿಗದೆ ಇರುವುದು ನನಗೆ ಬೇಸರ ಇಲ್ಲ, ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ನಡೆಯುತ್ತಿದ್ದಾಗ ಕುಮಾರಣ್ಣ ಸ್ವರೂಪ್‌ಗೆ ಟಿಕೆಟ್ ಕೊಟ್ಟಿದ್ದಾರೆ. ನಾವೂ ಮೂರು ಬಾರಿ ಫೋನ್ ಮಾಡಿ ಸ್ವರೂಪ್‌ಗೆ ಟಿಕೆಟ್ ಕೊಡಿ ಅಂತಾ ಕುಮಾರಣ್ಣಗೆ ಹೇಳಿದ್ದೇವು. ಕುಮಾರಣ್ಣ ಅವರಿಗೆ ಟಿಕೆಟ್ ನೀಡಿದ್ದಾರೆ. ಸ್ವರೂಪ್ ಗೆಲ್ಲುವುದು ನಮಗೆ ಮುಖ್ಯ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಬೇಕು. ಹೀಗಾಗಿ ನೀವೆಲ್ಲರೂ ಸ್ವರೂಪ್ ಗೆಲ್ಲಿಸಿ ಎಂದು ಮತದಾರರಿಗೆ ಭವಾನಿ ರೇವಣ್ಣ ಮನವಿ ಮಾಡಿದರು.
ನನಗೆ ದೇವೇಗೌಡರ ಆರೋಗ್ಯ ಮುಖ್ಯವಾಗಿತ್ತು. ದೇವೇಗೌಡರಿಗಿಂತ ನಾನೇ ದೊಡ್ಡವಳಾ ಅಂತಾ ಅನ್ನಿಸಿಬಿಡ್ತು. ಹಾಗಾಗಿ ನಾನೇ ತೀರ್ಮಾನಿಸಿ ಸ್ವರೂಪ್ ಹೆಸರು ಘೋಷಣೆ ಮಾಡಿಸಿದೆ. ಶುಕ್ರವಾರ ಒಳ್ಳೆಯ ದಿನ ಘೋಷಣೆ ಮಾಡಿ ಅಂತಾ ಕುಮಾರಣ್ಣಗೆ ಹೇಳಿದೆ. ನನಗೆ ಟಿಕೆಟ್ ಸಿಕ್ಕಿಲ್ಲ ಅಂತಾ ಹಾಸನ ಕಡೆಗಣಿಸಲ್ಲ. ಒಟ್ಟಿನಲ್ಲಿ ಬಿಜೆಪಿ ಸೋಲಿಸಬೇಕು ಅಷ್ಟೇ ನನ್ನ ಗುರಿ ಎಂದು ಕರೆ ನೀಡಿದರು.
ಹಾಸನ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಅದಕ್ಕಾಗಿ ನಿದ್ದೆ ಬಿಟ್ಟು ಕೆಲಸ ಮಾಡಿ, ಸ್ವರೂಪ್ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಸ್ವರೂಪ್ ಗೆದ್ದೇ ಗೆಲ್ಲುತ್ತಾನೆ ಎಂದರು. ಇನ್ನು ಜೆಡಿಎಸ್ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.












Click it and Unblock the Notifications