ಚಿಕ್ಕಮಗಳೂರು: ಮರಿ ಆನೆಯನ್ನು ಅಮ್ಮ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳ ಪರದಾಟ
ಚಿಕ್ಕಮಗಳೂರು, ಜುಲೈ 31: ಕಾಡಾನೆ ಗುಂಪಿನಿಂದ ಬೇರ್ಪಟ್ಟಿರುವ ಕಾಡಾನೆ ಮರಿಯೊಂದು ಮರಳಿ ಗುಂಪಿಗೆ ಸೇರಲಾಗದೆ ಪರದಾಡುತ್ತಿದ್ದು, ಕಾಡಾನೆ ಗುಂಪಿಗೆ ಸೇರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯ ಮೂಡಿಗೆರೆ-ಬೇಲೂರು ರಸ್ತೆಯಲ್ಲಿರುವ ಚೀಕನಹಳ್ಳಿ ಗ್ರಾಮದಲ್ಲಿ ಕಾಡಾನೆ ಮರಿ ತನ್ನ ತಾಯಿಯನ್ನು ಬೇರ್ಪಟ್ಟಿದೆ. ಹೆದ್ದಾರಿ ಪಕ್ಕದ ಕಾಫಿತೋಟದಲ್ಲಿ ದಿಕ್ಕು ತೋಚದೆ ಪುಟ್ಟ ಆನೆ ಮರಿ ಸುತ್ತಾಡುತ್ತಿದ್ದು ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಬೇಲೂರು, ಮೂಡಿಗೆರೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಕಾಡಾನೆ ಮರಿಗೆ ಅಪಾಯವಾಗದಂತೆ ಅದರ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಮರಿಯನ್ನು ಮರಳಿ ಗುಂಪಿಗೆ ಸೇರಿಲು ಪ್ರಯತ್ನ ನಡೆಸಿದರು ಪ್ರಯೋಜನವಾಗಿಲ್ಲ.
ತಾಯಿ ಆನೆ ಇರುವ ಗುಂಪು ಸ್ಥಳದಿಂದ ದೂರ ಹೋಗಿವೆ ಎನ್ನಲಾಗುತ್ತಿದ್ದು, ಒಮ್ಮೆ ಬೇರ್ಪಟ್ಟ ಮರಿಯನ್ನು ತಾಯಿ ಆನೆ ಮರಳಿ ತನ್ನ ಬಳಿ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತವೆ ಎನ್ನಲಾಗುತ್ತಿದೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಪೇಚೆಗೆ ಸಿಲುಕಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ಪಡೆದು ಆನೆ ಮರಿಯನ್ನು ಸುರಕ್ಷಿತವಾಗಿ ಹಿಡಿದು ತಾಯಿ ಆನೆ ಗುಂಪಿಗೆ ಬಿಡಲು ಕೊಂಡೊಯ್ಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೂಡಿಗೆರೆ ಬೇಲೂರು ಸಕಲೇಶಪುರ ಗಡಿಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಗುಂಪು ಸಂಚರಿಸುತ್ತಿದ್ದು, ಅದೇ ಗುಂಪಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವಾಗ ಗಾಬರಿಗೊಂಡ ಕಾಡಾನೆಗಳು ಮರಿಯನ್ನು ಬಿಟ್ಟು ಮುಂದೆ ಹೋಗಿರಬಹುದು ಎನ್ನಲಾಗುತ್ತಿದೆ. ಮರಿ ಆನೆಯನ್ನು ನೋಡಲು ಜನಜಂಗುಳಿ ತುಂಬಿದ್ದು, ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟರು.
ಇನ್ನು ಮೂಡಿಗೆರೆ-ಬೇಲೂರು ಭಾಗಗಳಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಳೆಗಳು ಕಾಡಾನೆ ಪಾಲಾಗುತ್ತಿದೆ. ಹೀಗಾಗಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications