ಚಿಕ್ಕಮಗಳೂರು:ಕೇಳಿದ ತಕ್ಷಣ ಹಣ ಕೊಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ
ಚಿಕ್ಕಮಗಳೂರು, ಜುಲೈ 22 : ಕೇಳಿದ ಕೂಡಲೇ ಹಣ ನೀಡಲಿಲ್ಲ ಎಂದು ತಾಯಿಯನ್ನೇ ಒಲೆ ಊದುವ ಕೊಳವೆಯಿಂದ ಹೆತ್ತ ಮಗನೇ ಹೊಡೆದು ಕೊಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಚ್ಚಡಮನೆ ಗ್ರಾಮದಲ್ಲಿ ನಡೆದಿದೆ. ತಾಯಿಯನ್ನೇ ಕೊಂದ ಮಗ ಬಳಿಕ ಇದು ಮನೆಗೆ ಬೆಂಕಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಊರಿನ ಜನರನ್ನೂ ಯಾಮಾರಿಸಿದ್ದಾನೆ.
ಜುಲೈ 18ರಂದು ಮನೆಯಲ್ಲಿ ತಾಯಿ ಲತಾ ಹಾಗೂ ಆಕೆಯ ಮಗ ಬಸವರಾಜ ಎನ್ನುವವನ ಮಧ್ಯೆ ಹಣಕ್ಕಾಗಿ ಗಲಾಟೆ ನಡೆದಿದೆ. ಈ ವೇಳೆ, ತಾಯಿ ಹಣ ಕೊಡಲಿಲ್ಲ ಎಂದು ಹೊಡೆದು ಸಾಯಿಸಿದ್ದಾನೆ. ಮರುದಿನ ಬೆಳಗ್ಗೆ ಊರಿನ ಜನರ ಮುಂದೆ ಅಮ್ಮನಿಗೆ ಫಿಡ್ಸ್ ಬರುತ್ತಿತ್ತು. ರಾತ್ರಿ ಕ್ಯಾಂಡಲ್ ಬೆಂಕಿ ಹಾಸಿಗೆಗೆ ತಾಕಿ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.
ಈತನ ಕಟ್ಟುಕಥೆಯನ್ನ ಊರಿನ ಜನ ನಂಬಿ ಅಂತ್ಯಸಂಸ್ಕಾರ ಕೂಡ ಮಾಡಿದ್ದಾರೆ. ಆದರೆ, ಮೃತಳ ತಂಗಿ ಮಗಳಿಗೆ ಮನೆಯಲ್ಲಿ ತಾಳಿ ನೇತಾಡುತ್ತಿದ್ದನ್ನ ಕಂಡು ಚಿಕ್ಕಮ್ಮ ತಾಳಿ ತೆಗೆಯುತ್ತಿರಲಿಲ್ಲ. ಇದೇಕೆ ಹೀಗೆ ಎಂದು ಅನುಮಾನಗೊಂಡು ಯಾರೋ ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಪೊಲೀಸರು ಮಗನನ್ನ ವಿಚಾರಿಸುತ್ತಿದ್ದಂತೆ ನಾನೇ ಕೊಂದು, ಡಿಸೇಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಹೆತ್ತವಳನ್ನ ಕೊಂದು ಕಾಗಕ್ಕ-ಗೂಬಕ್ಕನ ಕಥೆ ಹೇಳಿ ಊರಿನ ಜನರನ್ನು ನಂಬಿಸಿದ್ದನು. ರಾತ್ರಿ ಕೊಂದು ಬೆಳಗ್ಗೆ ಬಾಗಿಲಲ್ಲಿ ಕಣ್ಣೀರಾಕುತ್ತಿದ್ದವನನ್ನ ಕಂಡು ಜನ ಅಯ್ಯೋ ಪಾಪ . ಎಂದು ಅಂತ್ಯ ಸಂಸ್ಕಾರ ನೇರವೇರಿಸಿದ್ದರು. ಆದರೆ, ಈ ಹಂತಕ ಪುತ್ರ ಮಾಡಿದ ಕೊಲೆ ಊರಿನ ನಾಲ್ವರಿಗೆ ಗೊತ್ತಿತ್ತು. ಆದರೆ, ಅವರೂ ಅದನ್ನ ಯಾರಿಗೂ ಹೇಳಿರಲಿಲ್ಲ. ಹೊರಗಡೆ ಗೊತ್ತಾದರೆ ಬಂಧನ ಮಾಡಿ ಒಳಗೆ ಹಾಕ್ತಾರೆ ಯಾರಿಗೂ ಹೇಳಬೇಡ ಎಂದಿದ್ದಾರೆ.

ವಿಷಯ ಹೊರಗಡೆ ಬರುತ್ತಿದ್ದಂತೆ ಅಮ್ಮನನ್ನ ಕೊಂದ ಬಸವರಾಜನ ಜೊತೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರಿಂದ ಆ ನಾಲ್ವರನ್ನೂ ಪೊಲೀಸರು ಒದ್ದು ಒಳಗೆ ಹಾಕಿದ್ದಾರೆ. ಹೊಟ್ಟೆ-ಬಟ್ಟೆ ಕಟ್ಟಿ ಸಾಕಿದ್ದ ಮಗನೇ ತಾಯಿಯನ್ನ ಬಲಿ ತೆಗೆದುಕೊಂಡಿದ್ದಾನೆ. ಅಮ್ಮ ಅಂದರೆ ಜೀವ-ದೇವರು-ಜೀವನ ಎನ್ನುತ್ತಾರೆ. ಆದರೆ, ಹೆತ್ತು-ಹೊತ್ತು-ಹೊಟ್ಟೆ-ಬಟ್ಟೆ ಕಟ್ಟಿ ಸಾಕಿದ್ದ ಹೆತ್ತ ತಾಯಿಯನ್ನೇ ಕೊಲ್ಲುವ ಮಕ್ಕಳು ಇದ್ದಾರೆ ಅಂದರೆ ಇಂತಹ ಮಕ್ಕಳು ಬೇಕಾ ಎಂಬ ಪ್ರಶ್ನೆ ಕೂಡ ಮೂಡುತ್ತದೆ. ಇಂತಹ ಮಕ್ಕಳು ಹುಟ್ಟದಿದ್ದರೆ ಸಾಕು ಎಂದು ಊರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications