ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಚಿಕ್ಕಮಗಳೂರಿನ 2 ಸರ್ಕಾರಿ ಶಾಲೆಗಳು
ಚಿಕ್ಕಮಗಳೂರು, ಜುಲೈ 1: ಚಿಕ್ಕಮಗಳೂರು ಜಿಲ್ಲೆಯ ಎರಡು ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಶೈಕ್ಷಣಿಕ ಗುಣಮಟ್ಟದಲ್ಲಿ ಪ್ರಗತಿ ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ.
ಸಿಸ್ಲೆಪ್ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣದ ಅಳವಡಿಕೆಯ ಕುರಿತು ವಿಡಿಯೋ ಚಿತ್ರೀಕರಣದ ದಾಖಲೀಕರಣದಲ್ಲಿ ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಸರ್ಕಾರಿ ಶಾಲೆ ಹಾಗೂ ತರೀಕೆರೆ ತಾಲೂಕಿನ ಸೊಕ್ಕೆ ಪ್ರೌಢ ಶಾಲೆಗಳು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಆಯ್ಕೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಎರಡು ಶಾಲೆಗಳು ಆಯ್ಕೆಯಾಗಿರುವುದು ವಿಶೇಷವಾಗಿದ್ದು, ರಾಜ್ಯದ ಬೇರೆ ಯಾವುದೇ ಜಿಲ್ಲೆಯಿಂದ ಎರಡು ಶಾಲೆಗಳು ಆಯ್ಕೆಯಾಗಿಲ್ಲ ಎಂಬುದೇ ವಿಶೇಷವಾಗಿದೆ. ಇಲ್ಲಿಗೆ ಆಯ್ಕೆಯಾದ ಶಾಲೆಗಳಿಗೆ 5 ಸಾವಿರ ಪ್ರೋತ್ಸಾಹ ಧನ ಹಾಗೂ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗುತ್ತದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಸ್‍ಡಿಎಂಸಿ ಸಹಕಾರ
ಧಾರವಾಡ ವಲಯದ ರಾಜ್ಯ ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ಸಂಸ್ಥೆ(ಸಿಸ್ಲೆಪ್) ಮಾರ್ಗದರ್ಶನದಲ್ಲಿ ಶಾಲೆಯ ಅಭಿವೃದ್ಧಿ ಗುಣಮಟ್ಟದ ಕುರಿತು ವಿಡಿಯೋ ದಾಖಲೆ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಶಾಲೆಗಳು ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಶಾಲೆಯ ಗುಣಮಟ್ಟ, ಅಭಿವೃದ್ಧಿ, ಶಾಲಾ ಪರಿಸರ, ಸ್ವಚ್ಛತೆ, ಶೌಚಾಲಯ, ಸಂಸ್ಕೃತಿ, ಶೈಕ್ಷಣಿಕ ಚಟುವಟಿಕೆ, ತಾಂತ್ರಿಕತೆ ಅಳವಡಿಕೆ, ಸಮುದಾಯ ಸಹಭಾಗಿತ್ವ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಸ್‍ಡಿಎಂಸಿ ಸಹಕಾರ, ಶಿಕ್ಷಕರ ಕಾರ್ಯ ಹಾಗೂ ಇಲಾಖಾ ಮೇಲಾಧಿಕಾರಿಗಳ ಸಂದರ್ಶನದ ಆಧಾರದ ಮೇಲೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಈ ಕುರಿತು ಆರು ನಿಮಿಷದ ವಿಡಿಯೋ ಚಿತ್ರೀಕರಣ ಮಾಡಿ ದಾಖಲು ಮಾಡಲಾಗಿದ್ದು, ಈ ಎಲ್ಲಾ ಅಂಶಗಳನ್ನು ಗಮನಿಸಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ.

ಯಲಗುಡಿಗೆ ಶಾಲಾ ವಿಶೇಷ
ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಶಾಲೆ ಇತ್ತೀಚಿಗೆ ರಾಜ್ಯದಲ್ಲಿ ಸುದ್ದಿಯಾಗಿತ್ತು. ಕೊರೊನಾ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಶಿಕ್ಷಕಿ ಗೀತಾ ಪತ್ರ ಬರೆದು ಮಕ್ಕಳ ಕುಶಲೋಪರಿ ವಿಚಾರಿಸುವ ಮೂಲಕ ಶಿಕ್ಷಣ ಸಚಿವರ ಗಮನ ಸೆಳೆದಿತ್ತು. ಇದರ ಬೆನ್ನಲ್ಲೆ ಈಗ ಮತ್ತೊಂದು ಪ್ರಶಂಸೆಗೆ ಕಾರಣವಾಗಿದೆ. 18 ವಿದ್ಯಾರ್ಥಿಗಳಿರುವ ಈ ಶಾಲೆ ಸಿಪ್ಲೆಸ್ ಸಂಸ್ಥೆಯ ಆಯ್ಕೆಯಲ್ಲಿ ರಾಜ್ಯದ ಹಲವು ಶಾಲೆಗಳ ನಡುವೆ ಪೈಪೋಟಿ ನಡೆಸಿ ಆಯ್ಕೆಗೊಂಡಿದೆ. ಶಾಲೆಯಲ್ಲಿ ಸ್ವಚ್ಛತೆ ಪ್ರಾಮುಖ್ಯತೆ ನೀಡಲಾಗಿದ್ದು, ಸ್ಮಾರ್ಟ್ ಕ್ಲಾಸ್‌ಗೆ ಒತ್ತು ನೀಡಲಾಗಿದೆ. ಜೊತೆಗೆ ಸಮುದಾಯ ಸಹಭಾಗಿತ್ವ ಪ್ರಮುಖವಾರ ಕಾರಣ ಈ ಪ್ರಶಂಸೆಗೆ ಕಾರಣವಾಗಿದೆ ಎಂದು ಶಿಕ್ಷಕರು ಸಂತಸಗೊಂಡಿದ್ದಾರೆ.

ರಾಜ್ಯಕ್ಕೆ ಮಾದರಿ ಸೊಕ್ಕೆ ಪ್ರೌಢಶಾಲೆ
"34 ವರ್ಷಗಳ ಇತಿಹಾಸ ಹೊಂದಿದ ತರೀಕೆರೆ ತಾಲೂಕಿನ ಸೊಕ್ಕೆ ಸರ್ಕಾರಿ ಪ್ರೌಢ ಶಾಲೆಯೂ ಸಹ ಈ ಪ್ರಶಂಸೆಗೆ ಒಳಪಟ್ಟಿದ್ದು, 360 ಮಕ್ಕಳಿರುವ ಈ ಶಾಲೆ ಜಿಲ್ಲೆಯಲ್ಲಿಯೇ ಉತ್ತಮ ಶಿಕ್ಷಣಕ್ಕೆ ಹೆಸರುವಾಸಿ. ಯಾವುದೇ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಈ ಶಾಲೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಸಮುದಾಯ ಸಹಭಾಗಿತ್ವ, ಶಿಕ್ಷಕರ ಪಾಲ್ಗೊಳ್ಳುವಿಕೆ ಹಾಗೂ ಸತತವಾಗಿ ಎಸ್‍ಎಸ್‍ಎಲ್‌ಸಿ ಫಲಿತಾಂಶದಲ್ಲಿ ಶೇ.90ಕ್ಕೂ ಹೆಚ್ಚು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿ ಹೆಸರುಗಳಿಸುವ ಜೊತೆಗೆ ಈಗ ರಾಜ್ಯದಲ್ಲಿಯೂ ಹೆಸರುಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಶ್ರಮಕ್ಕೆ ಸಂದ ಪ್ರತಿಫಲ,'' ಎಂದು ಮುಖ್ಯ ಶಿಕ್ಷಕ ತಿಪ್ಪೇಶಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Recommended Video

ಜಿಲ್ಲೆಯ ಯಲಗುಡಿಗೆ, ಸೊಕ್ಕೆ ಪ್ರೌಢಶಾಲೆಗಳ ಆಯ್ಕೆ
"ಸಿಸ್ಲೆಪ್ ವತಿಯಿಂದ ರಾಜ್ಯದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಕೆ ಮಾಡಿಕೊಂಡಿರುವ ಶಾಲೆಗಳನ್ನು ಆಯ್ಕೆಮಾಡಲು ತಿಳಿಸಲಾಗಿತ್ತು. ಅದೇ ರೀತಿ ಜಿಲ್ಲೆಯ ಯಲಗುಡಿಗೆ, ಸೊಕ್ಕೆ ಪ್ರೌಢಶಾಲೆಗಳನ್ನು ಆಯ್ಕೆ ವಿಡಿಯೋ ದಾಖಲಿಸಿ ಕಳುಹಿಸಲಾಗಿತ್ತು. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯ ಎರಡು ಶಾಲೆಗಳು ಆಯ್ಕೆಯಾಗಿ ಪ್ರಶಸ್ತಿ ಗೆಲ್ಲುವ ಜೊತೆಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಈ ವೇಳೆ ಯಲಗುಡಿಗೆ ಶಾಲೆ ಮುಖ್ಯ ಶಿಕ್ಷಕರಾದ ಅಣ್ಣಯ್ಯ, ಶಿಕ್ಷಕಿ ಗೀತಾ ಹಾಗೂ ಸೊಕ್ಕೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಪ್ಪೇಶಪ್ಪ ಹಾಗೂ ಶಿಕ್ಷವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ,'' ಎಂದು ಚಿಕ್ಕಮಗಳೂರು ಜಿಲ್ಲಾ ಡಯಟ್ ಪ್ರಾಂಶುಪಾಲರಾದ ಪುಷ್ಪಲತಾ ಎಚ್.ಕೆ ತಿಳಿಸಿದರು.












Click it and Unblock the Notifications