Zika virus: ಸೋಂಕು ಹರಡುವ ಈ ಸೊಳ್ಳೆಯಿಂದ ಪಾರಾಗುವುದೇಗೆ?, ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿಯ ಸಲಹೆಗಳು ಹೀಗಿವೆ
ಚಿಕ್ಕಬಳ್ಳಾಪುರ, ನವೆಂಬರ್, 02: ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹಾಗೆಯೇ ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿ ಝಿಕಾ ವೈರಸ್ ಸೋಂಕಿನ ಲಕ್ಷಣಗಳೇನು, ಇದು ಹೇಗೆ ಹರಡುತ್ತದೆ ಹಾಗೂ ಇದರಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಜನರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಝೀಕಾ ಎಂಬುದು ಒಂದು ವೈರಸ್ ಸೋಂಕು. ಡೆಂಗೀ ಚಿಕೂನ್ ಗುನ್ಯ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಗಳಿಂದ ಈ ಸೋಂಕು ಹರಡುತ್ತವೆ. ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸ್ವಚ್ಚ ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ.

ಝಿಕಾ ವೈರಸ್ ಸೋಂಕಿನ ಲಕ್ಷಣಗಳು
ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ಗಂಧೆಗಳು (ದದ್ದುಗಳು), ಕೀಲು ಮತ್ತು ಸ್ನಾಯುಗಳಲ್ಲಿ ನೋವು ಹಾಗೂ ಇತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಬಹುತೇಕ ಝಿಕಾ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಹಾಗೂ ಸಾಧಾರಣ ಸ್ವರೂಪವಾಗಿದ್ದು, 2-7 ದಿನಗಳವರೆಗೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಝಿಕಾ ಸೋಂಕು ಕಾಣಿಸಿಕೊಂಡಲ್ಲಿ ಜನಿಸಿದ ಶಿಶುವಿನ ತಲೆಯ ಗಾತ್ರದಲ್ಲಿ ಕಡಿಮೆ (ಮೈಕ್ರೊಸೆಫಾಲಿ) ಬೆಳವಣಿಗೆ ದೋಷ ಕಂಡುಬರಬಹುದು.
ಝಿಕಾ ವೈರಸ್ ಪತ್ತೆ ಹಚ್ಚುವ ವಿಧಾನ
ರೋಗ ಲಕ್ಷಣಗಳು ಕಂಡುಬಂದವರ ರಕ್ತದ ಮಾದರಿ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಪತ್ತೆ ಹಚ್ಚಬಹುದು. ಈ ವೈರಸ್ ಸೋಂಕಿಗೆ ನಿರ್ಧಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿರುವುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ.
ಸಾಕಷ್ಟು ವಿಶ್ರಾಂತಿ ಪಡೆಯವುದು, ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರಿನ ಅಂಶವುಳ್ಳ ಆಹಾರ ಪದಾರ್ಥಗಳನ್ನು ಬಳಸುವುದು, ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡುವ ಔಷಧಿಗಳನ್ನು ಸೇವಿಸಬೇಕು. ಹಾಗೂ ರೋಗ ಲಕ್ಷಣಗಳು ಹೆಚ್ಚಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಸೋಂಕಿತರು ಬೇರೆಯವರಿಗೆ ರೋಗ ಹರಡದಂತೆ ತಡೆಯಲು ಸೊಳ್ಳೆ ಪರದೆಯನ್ನು ಬಳಸಬೇಕು.
ಮುಂಜಾಗ್ರತಾ ಕ್ರಮಗಳು
ಈಡಿಸ್ ಸೊಳ್ಳೆಗಳು ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಚವಾಗಿಡುವುದು, ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚುವುದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳವುದು ಹಾಗೂ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಅಷ್ಟೇ ಅಲ್ಲದೆ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು, ಸೊಳ್ಳೆ ಪರದೆ ಉಪಯೋಗಿಸುವುದು ಉತ್ತಮ.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications