ಕಾಫಿ ತಂದ ಮೃತ್ಯು: ತಾಯಿ, ಮಗಳು ಸಾವು, ಇಬ್ಬರು ಅಸ್ವಸ್ಥ
ಚಿಕ್ಕಬಳ್ಳಾಪುರ, ಜನವರಿ 19: ಕಾಫಿ ಸೇವಿಸಿ ತಾಯಿ ಮತ್ತ ಮಗಳು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.
ಕಾಫಿ ಕುಡಿದು ತಾಯಿ ಮತ್ತು ಮಗಳು ಮೃತಪಟ್ಟಿದ್ದು ಇನ್ನಿಬ್ಬರು ಮಕ್ಕಳು ಅಸ್ವಸ್ಥರಾಗಿದ್ದಾರೆ, ಅಕ್ಕುಲಮ್ಮ(70) ನರಸಮ್ಮ(50) ಮೃತ ದುರ್ದೈವಿಗಳು. ನರಸಮ್ಮನ ಮೊಮ್ಮಕ್ಕಳಾದ ಅರವಿಂದ್ (7) ಆರತಿ (5) ಅಸ್ವಸ್ಥರಾಗಿದ್ದಾರೆ. ಅವರು ಸಧ್ಯಕ್ಕೆ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಗ್ರಾಮದ ಅಂಗಡಿಯೊಂದರಿಂದ ತಂದಿದ್ದ ಕಾಫಿ ಪುಡಿಯಿಂದ ಮಾಡಿದ ಕಾಫಿಯನ್ನು ಶುಕ್ರವಾರ ಬೆಳಗ್ಗೆ ಸೇವಿಸಿದ್ದರು. ಕಾಫಿ ಸೇವಿಸಿದ ನಂತರ ನಾಲ್ವರೂ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಅಕ್ಕುಲಮ್ಮ ಮತ್ತು ನರಸಮ್ಮ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಕಾಫಿಯಲ್ಲಿ ಸಾಯುವಂತಹ ಅಂಶ ಏನಿತ್ತು, ಯಾರಾದರೂ ಉದ್ದೇಶಪೂರ್ವಕವಾಗಿಯೇ ಕಾಫಿಪುಡಿ ಅಥವಾ ಹಾಲಿಗೆ ವಿಷ ಬೆರೆಸಿದ್ದರಾ ಎನ್ನುವ ಕುರಿತು ಅನುಮಾನ ವ್ಯಕ್ತಪಡಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications